ಉಡುಪಿ: ಪ್ರೇಮ ಸಂಬಂಧದ ವಿಚಾರವಾಗಿ ಯುವತಿಯ ಕುಟುಂಬದವರು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾದ ಹಿನ್ನೆಲೆಯಲ್ಲಿ ಮನನೊಂದ ಯುವಕನೊಬ್ಬ ಚಿಕಿತ್ಸೆ ಪಡೆಯುತ್ತಿದ್ದ ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ಯುವಕನನ್ನು ಪ್ರದೀಪ್ ಎಂದು ಗುರುತಿಸಲಾಗಿದೆ. ಕಳೆದ ಎಂಟು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಪ್ರದೀಪ್, ಅಕ್ಟೋಬರ್ 27ರಂದು ರಾತ್ರಿ ಸುಮಾರು 10 ಗಂಟೆಗೆ ನಾಯರ್ ಕೋಡಿನಲ್ಲಿರುವ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಯುವತಿಯ ಸಹೋದರರಾದ ಪ್ರಸನ್ನ ಶೆಟ್ಟಿ, ಸುಧೀರ್ ಶೆಟ್ಟಿ, ಶೈಲೇಶ್ ಶೆಟ್ಟಿ, ಸನತ್, ಕೃಷ್ಣ, ಸುಜಯ್ ಸೇರಿದಂತೆ ಇತರರು ಮೂರು ಕಾರುಗಳಲ್ಲಿ ಬಂದು ಪ್ರದೀಪನನ್ನು ಬಲವಂತವಾಗಿ ಯುವತಿಯ ಮನೆಗೆ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲಿ ಪ್ರಸನ್ನ ಶೆಟ್ಟಿ ಬೆತ್ತದಿಂದ ಪ್ರದೀಪನ ಕಾಲು ಮತ್ತು ಬೆನ್ನಿನ ಭಾಗಕ್ಕೆ ಬಲವಾಗಿ ಹೊಡೆದು ಗಾಯಗೊಳಿಸಿದ್ದಾನೆ. ಅಲ್ಲಿದ್ದ ಇತರರು ಕೂಡ ಮರದ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪ್ರದೀಪನ ಸ್ನೇಹಿತರು ಯುವತಿಯ ಮನೆಗೆ ತೆರಳಿದ ಬಳಿಕ ಹಲ್ಲೆ ನಿಂತಿದೆ ಎನ್ನಲಾಗಿದೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಪ್ರದೀಪನನ್ನು ಅಕ್ಟೋಬರ್ 28ರಂದು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆಯಲ್ಲಿದ್ದಾಗ ತನ್ನ ಅಣ್ಣನೊಂದಿಗೆ ಮಾತನಾಡಿದ ಪ್ರದೀಪ್, ಯುವತಿ ಹಾಗೂ ಆಕೆಯ ಕುಟುಂಬದವರು ನಡೆಸಿದ ಹಲ್ಲೆ ಮತ್ತು ಮುಂದೆ ಜೀವಕ್ಕೆ ಅಪಾಯ ಉಂಟುಮಾಡುವ ಬೆದರಿಕೆ ಹಾಕಿರುವ ಬಗ್ಗೆ ನೋವು ವ್ಯಕ್ತಪಡಿಸಿದ್ದನು.
ಘಟನೆಯ ಬಳಿಕ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಪ್ರದೀಪ್, ಅಕ್ಟೋಬರ್ 30ರಂದು ಸಂಜೆ ಸುಮಾರು 5.30ರ ವೇಳೆಗೆ ಆಸ್ಪತ್ರೆಯ ಶೌಚಾಲಯದೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಸಂಬಂಧ ಮೃತನ ಸಹೋದರ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಶ್ರಾವ್ಯ ಶೆಟ್ಟಿ, ಪ್ರಸನ್ನ ಶೆಟ್ಟಿ, ಸುಧೀರ್, ಶೈಲೇಶ್, ಶಶಾಂಕ್, ಕೃಷ್ಣ, ಸುಜಯ್, ಸನತ್, ಹೊರ ರಾಜ್ಯದ ಇಬ್ಬರು ಕಾರ್ಮಿಕರು ಸೇರಿದಂತೆ ಇತರರ ವಿರುದ್ಧ ಸಾವಿಗೆ ಪ್ರಚೋದನೆ ನೀಡಿದ ಆರೋಪ ಮಾಡಲಾಗಿದೆ.
ದೂರಿನ ಆಧಾರದ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 149/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 108 ಮತ್ತು 190ರಂತೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.





