ಮಂಗಳೂರು: ನಗರದ ಸ್ಟೇಟ್ಬ್ಯಾಂಕ್ ಹಾಗೂ ಲೇಡಿಗೋಶನ್ ಆಸ್ಪತ್ರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಆಗಮಿಸಿರುವ ಅಲೆಮಾರಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಕೆಲವರ ವರ್ತನೆಯಿಂದ ಪ್ರಯಾಣಿಕರು ಹಾಗೂ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದು, ಈ ಪ್ರದೇಶದ ಕಾನೂನು ಸುವ್ಯವಸ್ಥೆಯ ಬಗ್ಗೆಯೂ ಪ್ರಶ್ನೆಗಳು ಎದುರಾಗಿವೆ.
ಸ್ಟೇಟ್ಬ್ಯಾಂಕ್ ನಗರದ ಪ್ರಮುಖ ವಾಣಿಜ್ಯ ಮತ್ತು ಸಾರಿಗೆ ಕೇಂದ್ರವಾಗಿರುವುದರಿಂದ ದಿನವಿಡೀ ಜನರ ಓಡಾಟ ಹೆಚ್ಚಾಗಿರುತ್ತದೆ. ರಾತ್ರಿ 10 ಗಂಟೆಯವರೆಗೂ ಬಸ್ಗಳ ಸಂಚಾರ ಇರುವುದರಿಂದ ತಡರಾತ್ರಿಯಲ್ಲಿಯೂ ಪ್ರಯಾಣಿಕರು ಈ ಭಾಗದಲ್ಲಿ ಸಂಚರಿಸುತ್ತಾರೆ. ಇಂತಹ ಜನನಿಬಿಡ ಪ್ರದೇಶದಲ್ಲಿ ಕೆಲವರು ಪರಸ್ಪರ ಗಲಾಟೆ ಮಾಡುವುದು, ಸಾರ್ವಜನಿಕರೊಂದಿಗೆ ವಾಗ್ವಾದ ನಡೆಸುವುದು ಹಾಗೂ ಅನಗತ್ಯವಾಗಿ ಗದ್ದಲ ಸೃಷ್ಟಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೆಲವರ ಬಳಿ ಚಾಕು ಸೇರಿದಂತೆ ಅಪಾಯಕಾರಿ ಆಯುಧಗಳಿರುವ ಸಾಧ್ಯತೆಯ ಬಗ್ಗೆಯೂ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
ರೈಲು, ಬಸ್ ಮೂಲಕ ಮಂಗಳೂರಿಗೆ ಆಗಮನ:
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮತ್ತು ಪ್ರಮುಖ ಬಸ್ ನಿಲ್ದಾಣಗಳು ಸಮೀಪದಲ್ಲಿರುವ ಕಾರಣ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವ ಕೆಲವರು ಸ್ಟೇಟ್ಬ್ಯಾಂಕ್, ಹಂಪನಕಟ್ಟೆ ಮತ್ತು ಬಂದರು ಪ್ರದೇಶಗಳಲ್ಲಿ ತಂಗುತ್ತಿದ್ದಾರೆ. ಬಸ್ ತಂಗುದಾಣಗಳು ಹಾಗೂ ಕಟ್ಟಡಗಳ ಮುಂಭಾಗ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನೇ ತಮ್ಮ ವಾಸಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ.
ಇವರಲ್ಲಿ ಕೆಲವರು ನಿರ್ಗತಿಕರಾಗಿದ್ದು, ಜೀವನ ನಿರ್ವಹಣೆಗೆ ಯಾವುದೇ ವ್ಯವಸ್ಥೆಯಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಆದರೆ, ಇನ್ನು ಕೆಲವರು ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆಯ ಬಳಿಕ ಸಾರ್ವಜನಿಕರೊಂದಿಗೆ ಜಗಳವಾಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ.
ಚೂರಿಯಿಂದ ಹಲ್ಲೆಗೆ ಯತ್ನಿಸಿದ ಘಟನೆ:
ಇತ್ತೀಚೆಗೆ ಲೇಡಿಗೋಶನ್ ಆಸ್ಪತ್ರೆ ಸಮೀಪದ ಬಸ್ ತಂಗುದಾಣದಲ್ಲಿ ರಾತ್ರಿ ವೇಳೆ ಕುಳಿತಿದ್ದ ವ್ಯಕ್ತಿಯೊಬ್ಬರ ಬಳಿ ಮೊಬೈಲ್ ಕೇಳುವ ನೆಪದಲ್ಲಿ ಬಂದ ಅಪರಿಚಿತ ವ್ಯಕ್ತಿ ಚೂರಿಯಿಂದ ಇರಿಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಸಂತ್ರಸ್ತರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಭಾಗದಲ್ಲಿ ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಕೆಲವರು ಪೊಲೀಸ್ ಕಮಿಷನರ್ ಕಚೇರಿಗೆ ತೆರಳಿ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ದೂರು ನೀಡುವಂತೆ ಒತ್ತಾಯಿಸಿದ ಘಟನೆಗಳೂ ನಡೆದಿವೆ ಎನ್ನಲಾಗಿದೆ.
ಕೆಲವರು ಯಾವುದೇ ಕಾರಣವಿಲ್ಲದೆ ಸಾರ್ವಜನಿಕರೊಂದಿಗೆ ವಾಗ್ವಾದ ನಡೆಸುವುದು, ಅಸಭ್ಯವಾಗಿ ನಡೆದುಕೊಳ್ಳುವುದು ಮತ್ತು ಜನರಿಗೆ ತೊಂದರೆ ನೀಡುವ ಬಗ್ಗೆ ದೂರುಗಳು ಬರುತ್ತಿವೆ. ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಇತರರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಾರ್ವಜನಿಕರಿಗೆ ಕುಳಿತುಕೊಳ್ಳಲೂ ಜಾಗವಿಲ್ಲ:
ಬಸ್ ತಂಗುದಾಣಗಳಲ್ಲಿ ಕೆಲವರು ಹಗಲಿನಲ್ಲಿಯೇ ಗಂಟೆಗಟ್ಟಲೆ ಕುಳಿತುಕೊಳ್ಳುವುದು, ಮಲಗುವುದು ಹಾಗೂ ಊಟ ಮಾಡುವುದು ಕಂಡುಬರುತ್ತಿದೆ. ತಮ್ಮ ಬ್ಯಾಗ್ ಮತ್ತು ಇತರ ವಸ್ತುಗಳನ್ನು ತಂಗುದಾಣದಲ್ಲೇ ಇಟ್ಟುಕೊಳ್ಳುವುದರಿಂದ ಬಸ್ಗಾಗಿ ಕಾಯುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸ್ಥಳದ ಕೊರತೆ ಎದುರಾಗುತ್ತಿದೆ.
ವಿಶೇಷವಾಗಿ ಮಳೆಗಾಲದಲ್ಲಿ ಇಂತಹವರು ಬಸ್ ತಂಗುದಾಣಗಳನ್ನೇ ಆಶ್ರಯಿಸುತ್ತಾರೆ. ಸ್ಥಳೀಯರು ಮಾನವೀಯತೆಯ ದೃಷ್ಟಿಯಿಂದ ಊಟ ಮತ್ತು ತಿಂಡಿ ನೀಡುತ್ತಿರುವುದರಿಂದ ಕೆಲವರು ಇದೇ ಪರಿಸರದಲ್ಲಿ ಮುಂದುವರಿದು ನೆಲೆಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಶೇಖರ್ ಪಾಂಡೇಶ್ವರ ತಿಳಿಸಿದ್ದಾರೆ.
ನಿರ್ಗತಿಕರ ಪುನರ್ವಸತಿಗೆ ಜಿಲ್ಲಾಡಳಿತ ಮುಂದಾಗಲಿ:
ಸಾರ್ವಜನಿಕ ಸ್ಥಳಗಳಲ್ಲಿ ಆಶ್ರಯ ಪಡೆದಿರುವ ಅಲೆಮಾರಿಗಳು ಹಾಗೂ ನಿರ್ಗತಿಕರನ್ನು ಗುರುತಿಸಿ, ಅವರ ಹಿನ್ನೆಲೆ ಮತ್ತು ಪರಿಸ್ಥಿತಿಯನ್ನು ಪರಿಶೀಲಿಸುವ ಅಗತ್ಯವಿದೆ. ಜಿಲ್ಲಾಡಳಿತವು ಸಂಬಂಧಪಟ್ಟ ಇಲಾಖೆಗಳ ಸಹಕಾರದೊಂದಿಗೆ ಅವರಿಗೆ ಸೂಕ್ತ ವಸತಿ ಹಾಗೂ ಪುನರ್ವಸತಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಅದೇ ವೇಳೆ, ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು. ನಿಜವಾಗಿಯೂ ಅಸಹಾಯಕರಾಗಿ ಜೀವನ ನಡೆಸುತ್ತಿರುವವರಿಗೆ ಅಗತ್ಯ ನೆರವು ಒದಗಿಸುವುದೂ ಅಷ್ಟೇ ಮುಖ್ಯವಾಗಿದೆ. ಸಾರ್ವಜನಿಕರ ಸುರಕ್ಷತೆ ಮತ್ತು ಮಾನವೀಯ ಕಾಳಜಿ ಎರಡನ್ನೂ ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕಿದೆ.





