ಉಡುಪಿ: ಕುಂದಾಪುರ ತಾಲೂಕಿನ ಬಳ್ಳೂರಿನಲ್ಲಿ ಟಿಪ್ಪರ್ ಲಾರಿ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮೂಡ್ಲಕಟ್ಟೆ ಕಾಲೇಜಿನ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಕ್ಟೋಬರ್ 30ರಂದು ನಡೆದ ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೃತರನ್ನು ಕಂಡೂರು ನಿವಾಸಿ ಟಿ.ಕೆ. ಮೊಹಮ್ಮದ್ ಶಾಯನ್ ಎಂದು ಗುರುತಿಸಲಾಗಿದೆ. ಅಪಘಾತದ ವೇಳೆ ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಿಗೆ ಒಳಗಾಗಿದ್ದ ಅವರನ್ನು ತಕ್ಷಣವೇ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದೊಯ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ವೈದ್ಯರ ಪ್ರಯತ್ನಗಳ ಹೊರತಾಗಿಯೂ ಅವರು ಬದುಕುಳಿಯಲಿಲ್ಲ.
ಸ್ಕೂಟರ್‌ನಲ್ಲಿ ಹಿಂಬದಿ ಸವಾರನಾಗಿದ್ದ ಮತ್ತೊಬ್ಬ ವಿದ್ಯಾರ್ಥಿ ಮೊಹಮ್ಮದ್ ರಾಯನ್ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಳೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿತ್ತು.
ಅಪಘಾತ ಸಂಭವಿಸಿದ್ದು ಹೇಗೆ?
ಮಣ್ಣು ಸಾಗಿಸುತ್ತಿದ್ದ ಎರಡು ಟಿಪ್ಪರ್ ಲಾರಿಗಳು ಕುಂದಾಪುರದ ಕಡೆಯಿಂದ ಅತಿವೇಗವಾಗಿ ಬರುತ್ತಿದ್ದವು ಎನ್ನಲಾಗಿದೆ. ಈ ಸಂದರ್ಭದಲ್ಲಿ ಮುಂದೆ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಿಂದಾಗಿ ಮೊದಲ ಟಿಪ್ಪರ್ ಚಾಲಕ ಏಕಾಏಕಿ ವೇಗ ಕಡಿಮೆ ಮಾಡಿದ್ದಾನೆ. ಇದೇ ವೇಳೆ ಹಿಂದಿನಿಂದ ವೇಗವಾಗಿ ಬಂದ ಮತ್ತೊಂದು ಟಿಪ್ಪರ್ ನಿಯಂತ್ರಣ ತಪ್ಪಿ ಮೊದಲ ಲಾರಿಗೆ ಹಿಂಬದಿಯಿಂದ ಬಲವಾಗಿ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಈ ದುರ್ಘಟನೆಯಲ್ಲಿ ಸ್ಕೂಟರ್‌ನಲ್ಲಿದ್ದ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮೊಹಮ್ಮದ್ ಶಾಯನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.





