05 November 2026 |

ಉಡುಪಿ ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ: ಮಧ್ಯಪ್ರದೇಶದಲ್ಲಿ ಇಬ್ಬರು ಪ್ರಮುಖ ಆರೋಪಿಗಳ ಬಂಧನ!

  • 05 Nov 2026 01:46:38 PM

ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಪ್ರದೀಪ್ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯ ಮೇರೆಗೆ ಮಧ್ಯಪ್ರದೇಶದಲ್ಲಿ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಬುಧವಾರ ತಿಳಿಸಿದ್ದಾರೆ.

 

ಮಧ್ಯಪ್ರದೇಶದಲ್ಲಿ ವಶಕ್ಕೆ ಪಡೆದಿರುವ ಇಬ್ಬರು ಆರೋಪಿಗಳನ್ನು ಉಡುಪಿಗೆ ಕರೆತರಲಾಗುತ್ತಿದೆ. ಅವರು ನಗರಕ್ಕೆ ತಲುಪಿದ ಬಳಿಕ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.

 

ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರದೀಪ್ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ, ಅವರಿಗೆ ಹಲ್ಲೆ ನಡೆಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂದು ಆರೋಪಿಸಿ ಪೆರ್ಡೂರಿನ ದಿಲೀಪ್ ಕುಮಾರ್ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

 

ಈ ದೂರಿನ ಆಧಾರದ ಮೇಲೆ ಹೊರರಾಜ್ಯದ ಇಬ್ಬರು ಕಾರ್ಮಿಕರು ಸೇರಿದಂತೆ 10ಕ್ಕೂ ಹೆಚ್ಚು ಮಂದಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಾದ ಬಳಿಕ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದರು. ಅವರ ಪತ್ತೆಗಾಗಿ ಉಡುಪಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ಆರಂಭಿಸಿದ್ದರು.

 

ಆರೋಪಿಗಳು ಮಧ್ಯಪ್ರದೇಶದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ ವಿಶೇಷ ಪೊಲೀಸ್ ತಂಡ ಇಬ್ಬರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಉಡುಪಿಗೆ ಕರೆತಂದ ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಮುಂದಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲು ಪೊಲೀಸರು ನಿರ್ಧರಿಸಿದ್ದಾರೆ.