05 November 2026 |

ನೆಲ್ಯಾಡಿ: ಟ್ರಾನ್ಸ್‌ಫಾರ್ಮರ್‌ಗೆ ಕಾರು ಡಿಕ್ಕಿ, ಕಂಬ ಮತ್ತು ವಿದ್ಯುತ್ ತಂತಿಗಳು ಕಾರಿನ ಮೇಲೆ – ಮೂವರು ಪಾರು!

  • 05 Nov 2026 08:59:37 AM

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ನೆಲ್ಯಾಡಿ ಸಮೀಪದ ದೊಂತಿಲದಲ್ಲಿ ಇಕೋ ಕಾರೊಂದು ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಂಬ ಹಾಗೂ ವಿದ್ಯುತ್ ತಂತಿಗಳು ಕಾರಿನ ಮೇಲೆ ಬಿದ್ದ ಘಟನೆ ನವೆಂಬರ್ 4ರಂದು ಮಧ್ಯಾಹ್ನ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

 

ನೆಲ್ಯಾಡಿಯಿಂದ ಬಲ್ಯ ಕಡೆಗೆ ಪ್ರಯಾಣಿಸುತ್ತಿದ್ದ ಬಲ್ಯ ನಿವಾಸಿ ಸುಂದರ ಆಳ್ವ ಅವರ ಇಕೋ ಕಾರು, ಕೌಕ್ರಾಡಿ ಗ್ರಾಮದ ದೊಂತಿಲ ಬಳಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಅಪ್ಪಳಿಸಿದೆ.

 

ಡಿಕ್ಕಿಯ ತೀವ್ರತೆಗೆ ಟ್ರಾನ್ಸ್‌ಫಾರ್ಮರ್‌ನ ಒಂದು ಕಂಬ ಮುರಿದು ಕಾರಿನ ಮೇಲೆ ಬಿದ್ದಿದೆ. ಇದರೊಂದಿಗೆ ವಿದ್ಯುತ್ ತಂತಿಗಳೂ ಕಾರಿನ ಮೇಲೆ ಬಿದ್ದಿವೆ. ಆ ಸಮಯದಲ್ಲಿ ವಿದ್ಯುತ್ ಸಂಪರ್ಕ ಇದ್ದರೂ, ತಕ್ಷಣವೇ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದರಿಂದ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದೆ.

 

ಕಾರಿನಲ್ಲಿದ್ದ ಚಾಲಕ ಸುಂದರ ಆಳ್ವ, ಅವರ ಪತ್ನಿ ಮತ್ತು ಸೊಸೆ ಸುರಕ್ಷಿತವಾಗಿ ಪಾರಾಗಿದ್ದಾರೆ.

 

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ನೆಲ್ಯಾಡಿ ಮೆಸ್ಕಾಂ ಕಿರಿಯ ಎಂಜಿನಿಯರ್ ರಾಮಣ್ಣ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.