06 November 2026 |

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಇಒ ಅಮಾನತು ವಿಚಾರ – ಆದೇಶ ರದ್ದಾಗಿದೆ ಎಂಬ ಚರ್ಚೆ!

  • 06 Nov 2026 06:07:55 PM

ಪುತ್ತೂರು: ಇಲ್ಲಿನ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್‌ ಅವರನ್ನು ಅಮಾನತುಗೊಳಿಸಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆದರೆ ಈವರೆಗೆ ಅಮಾನತು ಆದೇಶದ ಅಧಿಕೃತ ಪ್ರತಿ ಲಭ್ಯವಾಗಿಲ್ಲ.

 

ಅಮಾನತು ಆದೇಶ ಹಿಂಪಡೆಯಲಾಗಿದೆಯೇ?

ಕೆ.ವಿ. ಶ್ರೀನಿವಾಸ್‌ ಅವರನ್ನು ಅಮಾನತುಗೊಳಿಸಿರುವುದು ನಿಜ ಎಂಬ ಮಾಹಿತಿ ಹರಿದಾಡುತ್ತಿದ್ದರೆ, ಮತ್ತೊಂದೆಡೆ ಅಮಾನತು ಆದೇಶವನ್ನು ರದ್ದುಗೊಳಿಸಿ ಹಿಂಪಡೆಯಲಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

 

ಈ ಬಗ್ಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನು ವಿಚಾರಿಸಿದಾಗ, ಯಾವುದೇ ಅಮಾನತು ಆದೇಶ ತಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಅಮಾನತು ಆದೇಶ ಹೊರಡಿಸಿದ್ದರೆ ಅದರ ಅಧಿಕೃತ ಪ್ರತಿಯನ್ನು ನೀಡಬೇಕು. ಕಾರ್ಯನಿರ್ವಹಣಾಧಿಕಾರಿಯವರು ರಜೆಯ ಮೇಲೆ ತೆರಳಿರುವುದನ್ನು ಅಮಾನತು ಎಂದು ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

ಇನ್ನು ಈ ವಿಚಾರದ ಕುರಿತು ನೇರ ಸ್ಪಷ್ಟನೆ ಪಡೆಯಲು ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್‌ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ ಅವರು ಕರೆ ಸ್ವೀಕರಿಸದ ಕಾರಣ ಅವರ ಪ್ರತಿಕ್ರಿಯೆ ಲಭ್ಯವಾಗಿಲ್ಲ.