06 November 2026 |

ಗೃಹಲಕ್ಷ್ಮಿ ಯೋಜನೆಯ ₹2,000 ಸಹಾಯಧನ ಫಲಾನುಭವಿಗಳ ಕಾನೂನುಬದ್ಧ ಹಕ್ಕಲ್ಲ: ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಸ್ಪಷ್ಟನೆ!

  • 06 Nov 2026 06:25:47 PM

ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಪ್ರಮುಖವಾಗಿರುವ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ನೀಡಲಾಗುತ್ತಿರುವ ಮಾಸಿಕ ₹2,000 ಹಣವನ್ನು ಫಲಾನುಭವಿಗಳು ತಮ್ಮ ಕಾನೂನುಬದ್ಧ ಹಕ್ಕು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

 

ಸರ್ಕಾರದ ಜನಪರ ಹಾಗೂ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವುದು ಆಡಳಿತಾತ್ಮಕ ನಿರ್ಧಾರ ಮತ್ತು ರಾಜ್ಯದ ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿರುತ್ತದೆ. ಹೀಗಾಗಿ, ಇಂತಹ ಯೋಜನೆಗಳ ಸೌಲಭ್ಯಗಳನ್ನು ಮುಂದುವರಿಸುವಂತೆ ಫಲಾನುಭವಿಗಳು ಕಾನೂನಿನ ಮೂಲಕ ಒತ್ತಾಯಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಸರ್ಕಾರ ತನ್ನ ಲಿಖಿತ ಹೇಳಿಕೆಯಲ್ಲಿ ವ್ಯಕ್ತಪಡಿಸಿದೆ.

 

ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಸುಮಾರು 1.26 ಕೋಟಿ ಮಹಿಳೆಯರು ಫಲಾನುಭವಿಗಳಾಗಿದ್ದಾರೆ. ಆದರೆ, 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ತಲಾ ₹2,000ರಂತೆ ಎರಡು ಕಂತುಗಳ ಹಣ ಇನ್ನೂ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಬಾಕಿ ಮೊತ್ತವನ್ನು ಬಿಡುಗಡೆ ಮಾಡಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಆರ್. ಗಂಗಾ ಮತ್ತು ಜಿ.ಡಿ. ಪವಿತ್ರಾ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

 

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಕೆ.ಎಸ್. ಭರತ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠದ ಮುಂದೆ ರಾಜ್ಯ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಅವುಗಳಿಗೆ ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿಯೇ ಪ್ರಮುಖ ಮಾನದಂಡವಾಗಿದೆ ಎಂದು ಸರ್ಕಾರ ವಾದಿಸಿದೆ.

 

ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣದ ಕುರಿತು ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿರುವ ಈ ಲಿಖಿತ ಹೇಳಿಕೆ ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.