ಮಣಿಪಾಲ: ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಗುಂಪು ಸೇರಿಕೊಂಡು ಪರಸ್ಪರ ಹೊಡೆದಾಡಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಯುವಕರು ಸೇರಿದಂತೆ ಇತರರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಆರ್ಷ್ ಅಮಿತ್ ಶಂಕರ್, ಉತ್ಕರ್ಷ್, ವಿನಾಯಕ ಭಾರದ್ವಾಜ್, ವೇದಾಂತ್ ಶಂಕರ್, ಚೇತನ್, ಅಕ್ಷತ್ ಸಿಂಗ್, ಲಿನ್ ಪೊರ್ಡ್ ಲೆನಾಕ್ಸ್, ಅನುರಾಗ್ ಮುಖರ್ಜಿ, ಶುಭಂ ನಂದಿ, ಅರ್ಜುನ್ ಶಾ ಹಾಗೂ ಪ್ರಜ್ವಲ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಣಿಪಾಲದ ಈಶ್ವರನಗರದಲ್ಲಿರುವ ಎಪಿಕೋಡ್ ಸೆಂಟರ್ ಎದುರು, ರಾಷ್ಟ್ರೀಯ ಹೆದ್ದಾರಿ 169(A) ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಯುವಕರ ಗುಂಪೊಂದು ಪರಸ್ಪರ ಹೊಡೆದಾಡಿಕೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇನ್‌ಸ್ಟಾಗ್ರಾಂ ಹಾಗೂ ವಾಟ್ಸ್‌ಆ್ಯಪ್ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಈ ವಿಡಿಯೊ ವ್ಯಾಪಕವಾಗಿ ಹರಿದಾಡಿತ್ತು.
ಈ ಘಟನೆ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಸಿಬ್ಬಂದಿ ಸಿದ್ದೇಶಿ ಜಿ.ಆರ್. ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವಿಡಿಯೊದಲ್ಲಿರುವ ಯುವಕರ ಗುರುತು ಪತ್ತೆಹಚ್ಚಲು ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿದಾಗ, ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರ ನಡುವೆ ಗಲಾಟೆ ನಡೆದು ಹೊಡೆದಾಟ ಸಂಭವಿಸಿರುವುದು ತಿಳಿದುಬಂದಿದೆ.
ಆರೋಪಿತರು ರಾಷ್ಟ್ರೀಯ ಹೆದ್ದಾರಿ 169(A) ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಬೈಕ್‌ಗಳನ್ನು ನಿಲ್ಲಿಸಿಕೊಂಡು ಗುಂಪು ಸೇರಿ ಗಲಾಟೆ ನಡೆಸಿದ್ದರು. ಇದರಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳ ಓಡಾಟಕ್ಕೆ ತೊಂದರೆಯಾಗಿದ್ದು, ಸಾರ್ವಜನಿಕರಿಗೂ ತೀವ್ರ ಅನಾನುಕೂಲ ಉಂಟಾಗಿತ್ತು. ಅಲ್ಲದೆ, ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.





