ಮಾಣಿ: ಬಂಟ್ವಾಳ ತಾಲೂಕಿನ ಮಾಣಿ ಜಂಕ್ಷನ್ನಲ್ಲಿ ಪಟಾಕಿ ಅಂಗಡಿ ಬಳಿ ನಿಂತಿದ್ದ ವ್ಯಕ್ತಿಯ ಮೇಲೆ ಬೊಲೆರೋ ಜೀಪು ಹರಿಸಿ ಹತ್ಯೆಗೆ ಯತ್ನಿಸಿದ ಆರೋಪದಡಿ ಜಗದೀಶ್ ಜೈನ್ ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ನವೆಂಬರ್ 9ರಂದು ಸಂಜೆ ಮಾಣಿ ಜಂಕ್ಷನ್ನ ಮೈದಾನದಲ್ಲಿರುವ ಪಟಾಕಿ ಅಂಗಡಿ ಬಳಿ ಮಾಣಿ ನಿವಾಸಿ ವಿಕೇಶ್ ಕೆ. (32) ನಿಂತಿದ್ದ ವೇಳೆ ಈ ಘಟನೆ ನಡೆದಿದೆ.
ದೂರಿನ ಪ್ರಕಾರ, ವಿಕೇಶ್ ಅವರ ಪರಿಚಯಸ್ಥ ಜಗದೀಶ್ ಜೈನ್ ಬೊಲೆರೋ ಜೀಪನ್ನು ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಅವರಿಗೆ ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆ. ಅಪಾಯವನ್ನು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ವಿಕೇಶ್ ಜೀಪಿನ ಬಾನೆಟ್ ಮೇಲೆ ಹಾರಿ ಬಳಿಕ ನೆಲಕ್ಕೆ ಬಿದ್ದಿದ್ದು, ಅವರ ಎಡಗಾಲಿನ ಮೊಣಗಂಟಿಗೆ ಗಾಯವಾಗಿದೆ.
ಇಷ್ಟಕ್ಕೇ ನಿಲ್ಲದ ಆರೋಪಿ, ವಿಕೇಶ್ ಅವರ ಸಂಬಂಧಿ ತೀರ್ಥಪ್ರಸಾದ್ ಅವರ ಮೇಲೂ ಜೀಪು ಹರಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ. ಆದರೆ ಅವರು ಸಮಯಪ್ರಜ್ಞೆಯಿಂದ ತಪ್ಪಿಸಿಕೊಂಡಿದ್ದಾರೆ.
ಘಟನಾ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸುತ್ತಿದ್ದಂತೆ ಆರೋಪಿ ವಿಕೇಶ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮುಂದೊಂದು ದಿನ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಲಂ 109, 118(1), 352 ಹಾಗೂ 351(2)ರಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿ ಜಗದೀಶ್ ಜೈನ್ ಈ ಹಿಂದೆಯೂ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸಿದ್ದ ಎನ್ನಲಾಗಿದೆ. ಇದೀಗ ಮಾಣಿ ಜಂಕ್ಷನ್ನಲ್ಲಿ ಬೊಲೆರೋ ಜೀಪಿನಿಂದ ವ್ಯಕ್ತಿಗೆ ಡಿಕ್ಕಿ ಹೊಡೆದು ಹತ್ಯೆಗೆ ಯತ್ನಿಸಿದ ಗಂಭೀರ ಆರೋಪ ಕೇಳಿಬಂದಿದ್ದು, ವಿಟ್ಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.





