13 November 2026 |

ಮದುವೆಗೆ ನಾಲ್ಕೇ ದಿನ ಬಾಕಿ ಇರುವಾಗ ಭೀಕರ ದುರಂತ: ಲಾರಿ ಹರಿದು ಭಾವಿ ವಧು ಸೇರಿ ಇಬ್ಬರು ಯುವತಿಯರ ಸಾವು!

  • 12 Nov 2026 06:41:59 PM

ಬೆಂಗಳೂರು: ಮದುವೆಯ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ಕ್ಷಣಾರ್ಧದಲ್ಲಿ ಶೋಕ ಆವರಿಸಿದೆ. ಮದುವೆಯ ಆಮಂತ್ರಣ ಪತ್ರಿಕೆ ಹಂಚಲು ಸ್ಕೂಟಿಯಲ್ಲಿ ತೆರಳುತ್ತಿದ್ದ ಭಾವಿ ವಧು ಸೇರಿದಂತೆ ಇಬ್ಬರು ಯುವತಿಯರು ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದುರ್ಘಟನೆ ಬೆಂಗಳೂರು-ಮೈಸೂರು ರಸ್ತೆಯ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ ಸಮೀಪ ನಡೆದಿದೆ.

 

ಮೃತರನ್ನು ಸಿಂಧುಶ್ರೀ (29) ಮತ್ತು ಅವರ ಅತ್ತೆಯ ಮಗಳು ವಿದ್ಯಾ (19) ಎಂದು ಗುರುತಿಸಲಾಗಿದೆ.

 

ಸಿಂಧುಶ್ರೀ ಅವರ ವಿವಾಹ ಮುಂದಿನ ಸೋಮವಾರ ನಿಗದಿಯಾಗಿತ್ತು. ಮದುವೆಗೆ ಕೇವಲ ನಾಲ್ಕು ದಿನಗಳು ಬಾಕಿ ಇದ್ದ ಹಿನ್ನೆಲೆಯಲ್ಲಿ ಮನೆಯಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿದ್ದವು. ಈ ನಡುವೆ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ಸಂಬಂಧಿಕರಿಗೆ ಹಂಚಲು ಸಿಂಧುಶ್ರೀ ಅವರು ವಿದ್ಯಾ ಜೊತೆ ಸ್ಕೂಟಿಯಲ್ಲಿ ಕತ್ರಿಗುಪ್ಪೆ ಕಡೆಗೆ ತೆರಳುತ್ತಿದ್ದರು.

 

ಈ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ಬಂದ ಲಾರಿಯೊಂದು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಇಬ್ಬರೂ ರಸ್ತೆಗೆ ಬಿದ್ದಿದ್ದು, ಲಾರಿಯ ಚಕ್ರಗಳು ಅವರ ಮೇಲೆ ಹರಿದಿವೆ. ಗಂಭೀರ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

 

ಅಪಘಾತ ಸಂಭವಿಸಿದ ಕೂಡಲೇ ಲಾರಿ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಮಾಹಿತಿ ಪಡೆದ ಬ್ಯಾಟರಾಯನಪುರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

 

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಲಾರಿ ಚಾಲಕನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.