ನವದೆಹಲಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಸಂಘರ್ಷಗಳಿಂದ ರಸಗೊಬ್ಬರಗಳ ಬೆಲೆ ಹೆಚ್ಚಳವಾಗಿದ್ದರೂ, ಅದರ ಹೊರೆ ರೈತರ ಮೇಲೆ ಬೀಳದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 2026-27ನೇ ಸಾಲಿನ ರಾಬಿ ಹಂಗಾಮಿಗೆ ಫಾಸ್ಪೆಟಿಕ್ ಮತ್ತು ಪೊಟ್ಯಾಸಿಕ್ (ಪಿ & ಕೆ) ರಸಗೊಬ್ಬರಗಳಿಗಾಗಿ ₹62,370 ಕೋಟಿ ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪೋಷಕಾಂಶ ಆಧಾರಿತ ಸಬ್ಸಿಡಿ (ಎನ್‌ಬಿಎಸ್) ದರಗಳನ್ನು ಅಂತಿಮಗೊಳಿಸಲಾಗಿದೆ. ಇದರೊಂದಿಗೆ 50 ಕೆ.ಜಿ. ತೂಕದ ಡಿಎಪಿ ರಸಗೊಬ್ಬರ ಚೀಲದ ಬೆಲೆ ₹1,350ರಲ್ಲೇ ಮುಂದುವರಿಯಲಿದೆ.
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಬಿಕ್ಕಟ್ಟು ಹಾಗೂ ರಷ್ಯಾ-ಉಕ್ರೇನ್ ನಡುವಿನ ಯುದ್ಧದ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಬೆಲೆ ಏರಿಕೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಆರ್ಥಿಕ ಹೊರೆ ಆಗದಂತೆ ಸಬ್ಸಿಡಿ ನೀಡಲು ಸರ್ಕಾರ ಮುಂದಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸಚಿವ ಸಂಪುಟದ ಇತರ ಪ್ರಮುಖ ನಿರ್ಧಾರಗಳು:
1. ನೋಯ್ಡಾ ಮೆಟ್ರೋ ವಿಸ್ತರಣೆಗೆ ಅನುಮೋದನೆ: ನೋಯ್ಡಾ ಸೆಕ್ಟರ್ 51ರಿಂದ ಗ್ರೇಟರ್ ನೋಯ್ಡಾ ಸೆಕ್ಟರ್ 4ರವರೆಗೆ ಐದು ನಿಲ್ದಾಣಗಳನ್ನು ಒಳಗೊಂಡ 8.449 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ₹2,390 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.
2. ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯ ನಿರ್ಮಾಣ: ದೆಹಲಿಯ ಉತ್ತರ ಮತ್ತು ದಕ್ಷಿಣ ಬ್ಲಾಕ್ ಪ್ರದೇಶಗಳಲ್ಲಿ ₹3,230 ಕೋಟಿ ವೆಚ್ಚದಲ್ಲಿ 'ಯುಗೆ ಯುಗೀನ್ ಭಾರತ್' ವಸ್ತುಸಂಗ್ರಹಾಲಯ ನಿರ್ಮಿಸಲು ಸಂಪುಟ ಒಪ್ಪಿಗೆ ನೀಡಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ಇದು ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯವಾಗುವ ನಿರೀಕ್ಷೆಯಿದೆ.
3. ಸಣ್ಣ ಉದ್ಯಮಗಳಿಗೆ ಸಾಲ ಖಾತರಿ ಯೋಜನೆ ವಿಸ್ತರಣೆ: ಸೂಕ್ಷ್ಮ ಘಟಕಗಳ ಸಾಲ ಖಾತರಿ ನಿಧಿ ಯೋಜನೆಯನ್ನು 2031ರ ಮಾರ್ಚ್‌ವರೆಗೆ ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ₹5,000 ಕೋಟಿ ನಿಧಿ ಒದಗಿಸಲು ಅನುಮೋದನೆ ನೀಡಲಾಗಿದೆ.





