12 November 2026 |

ಸ್ನೇಹಿತನ ಬ್ಯಾಂಕ್ ಖಾತೆ ಬಳಸಿ ಸೈಬರ್ ವಂಚನೆ ಆರೋಪ: ಮಂಗಳೂರಿನಲ್ಲಿ ದೂರು ದಾಖಲು

  • 12 Nov 2026 10:32:05 AM

ಮಂಗಳೂರು: ಬ್ಯಾಂಕ್ ಖಾತೆ ಬ್ಲಾಕ್ ಆಗಿದೆ ಎಂದು ಹೇಳಿ, ವಿದೇಶದಿಂದ ಬರುವ ಹಣವನ್ನು ಸ್ನೇಹಿತನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ನಗದು ರೂಪದಲ್ಲಿ ಪಡೆದುಕೊಂಡಿರುವ ಸೈಬರ್ ವಂಚನೆ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಅಂಗಾರಗುಂಡಿ ಕೈಗಾರಿಕಾ ಪ್ರದೇಶದ ನಿವಾಸಿ ಅಸ್ಪೀರ್ (34) ವಿರುದ್ಧ ಮಹಮ್ಮದ್ ಝುಬೇರ್ ಅಲಿ (33) ಅವರು ಬೈಕಂಪಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

ದೂರುದಾರ ಝುಬೇರ್ ಅಲಿ ಮತ್ತು ಅಸ್ಪೀರ್ ಸ್ನೇಹಿತರಾಗಿದ್ದರು. 2025ರ ಮಾರ್ಚ್ ಎರಡನೇ ವಾರದಲ್ಲಿ ಝುಬೇರ್ ಹಿಂದೆ ಕೆಲಸ ಮಾಡುತ್ತಿದ್ದ ಬೈಕಂಪಾಡಿಯ ಮೊಬೈಲ್ ಅಂಗಡಿಗೆ ಬಂದಿದ್ದ ಅಸ್ಪೀರ್, ತನ್ನ ಬ್ಯಾಂಕ್ ಖಾತೆ ಬ್ಲಾಕ್ ಆಗಿರುವುದಾಗಿ ತಿಳಿಸಿದ್ದನು. ವಿದೇಶದಿಂದ ತನ್ನ ಖಾತೆಗೆ ಬರಬೇಕಾದ ಹಣವನ್ನು ಝುಬೇರ್ ಅವರ ಕೆನರಾ ಬ್ಯಾಂಕ್ ಖಾತೆಗೆ ವರ್ಗಾಯಿಸುವುದಾಗಿ ಹೇಳಿ, ಹಣವನ್ನು ಡ್ರಾ ಮಾಡಿ ನೀಡುವಂತೆ ಮನವಿ ಮಾಡಿದ್ದನು.

 

ಸ್ನೇಹಿತನ ಮಾತನ್ನು ನಂಬಿದ ಝುಬೇರ್ ಇದಕ್ಕೆ ಒಪ್ಪಿಕೊಂಡಿದ್ದರು. ಅದರಂತೆ 2025ರ ಮಾರ್ಚ್ 10ರಂದು ಆರ್‌ಟಿಜಿಎಸ್ ಮೂಲಕ ₹5.20 ಲಕ್ಷ ಹಣ ಅವರ ಕೆನರಾ ಬ್ಯಾಂಕ್ ಖಾತೆಗೆ ಜಮೆಯಾಗಿತ್ತು. ಹಣ ಜಮೆಯಾದ ಕೂಡಲೇ ಅಸ್ಪೀರ್ ವಾಟ್ಸಾಪ್ ಮೂಲಕ ಸ್ಕ್ರೀನ್‌ಶಾಟ್ ಕಳುಹಿಸಿ, ಕರೆ ಮಾಡಿ ಹಣವನ್ನು ಹಿಂಪಡೆಯುವಂತೆ ತಿಳಿಸಿದ್ದನು.

 

ಅದೇ ದಿನ ಮಧ್ಯಾಹ್ನ ಸುಮಾರು 3 ಗಂಟೆಗೆ ಇಬ್ಬರೂ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಕೆನರಾ ಬ್ಯಾಂಕ್ ಶಾಖೆಗೆ ತೆರಳಿದ್ದರು. ಅಸ್ಪೀರ್ ಕಾರಿನಲ್ಲೇ ಉಳಿದಿದ್ದು, ಝುಬೇರ್ ಅವರನ್ನು ಬ್ಯಾಂಕ್ ಒಳಗೆ ಕಳುಹಿಸಿದ್ದನು. ಝುಬೇರ್ ಚೆಕ್ ಮೂಲಕ ₹5.10 ಲಕ್ಷ ಹಣವನ್ನು ಡ್ರಾ ಮಾಡಿ ಅಸ್ಪೀರ್‌ಗೆ ನೀಡಿದ್ದರು.

 

ನಂತರ ಝುಬೇರ್ ಅವರ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ವಿವಿಧ ಆನ್‌ಲೈನ್ ದೂರುಗಳು ದಾಖಲಾಗಿರುವ ವಿಷಯ ತಿಳಿದುಬಂದಿದೆ. ಈ ಬಗ್ಗೆ ಬ್ಯಾಂಕಿಗೆ ತೆರಳಿ ವಿಚಾರಣೆ ನಡೆಸಿದಾಗ, ತಮ್ಮ ಖಾತೆಗೆ ಜಮೆಯಾಗಿದ್ದ ಹಣ ಸೈಬರ್ ವಂಚನೆಗೆ ಸಂಬಂಧಿಸಿದ್ದೆಂಬ ವಿಚಾರ ಬೆಳಕಿಗೆ ಬಂದಿದೆ.

 

ವಿವಿಧ ರಾಜ್ಯಗಳ ಪೊಲೀಸ್ ಠಾಣೆಗಳಲ್ಲಿ ಈ ಹಣದ ವಹಿವಾಟಿಗೆ ಸಂಬಂಧಿಸಿದಂತೆ ಆನ್‌ಲೈನ್ ದೂರುಗಳು ದಾಖಲಾಗಿರುವುದು ತಿಳಿದುಬಂದಿದೆ. ಸ್ನೇಹಿತನ ಮಾತನ್ನು ನಂಬಿ ತನ್ನ ಬ್ಯಾಂಕ್ ಖಾತೆಯನ್ನು ಬಳಸಲು ಅವಕಾಶ ನೀಡಿದ್ದರಿಂದ ಸಮಸ್ಯೆಗೆ ಸಿಲುಕಿರುವ ಝುಬೇರ್ ಅಲಿ, ಅಸ್ಪೀರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.