14 November 2026 |

ಮಂಗಳೂರಿನ ನಂತೂರು ಜಂಕ್ಷನ್‌ನಲ್ಲಿ ಭೀಕರ ಅಪಘಾತ: ಲಾರಿಗೆ ಕಾರು ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ

  • 13 Nov 2026 12:19:16 PM

ಮಂಗಳೂರು: ನಗರದ ನಂತೂರು ಜಂಕ್ಷನ್‌ನಲ್ಲಿ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನವೆಂಬರ್ 12ರ ಗುರುವಾರ ರಾತ್ರಿ ನಡೆದಿದೆ.

 

ರಾತ್ರಿ ಸುಮಾರು 9.50ರ ವೇಳೆಗೆ ಪಂಪ್‌ವೆಲ್ ಕಡೆಯಿಂದ ತಮಿಳುನಾಡು ನೋಂದಣಿಯ ಲಾರಿಯೊಂದು ನಂತೂರು ಜಂಕ್ಷನ್‌ಗೆ ಬರುತ್ತಿತ್ತು. ಈ ವೇಳೆ ಲಾರಿ ಚಾಲಕ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಏಕಾಏಕಿ ಬ್ರೇಕ್ ಹಾಕಿದ್ದಾನೆ ಎನ್ನಲಾಗಿದೆ. ಪರಿಣಾಮ, ಹಿಂದಿನಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಲಾರಿಯ ಹಿಂಭಾಗಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ.

 

ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಕಾರು ಚಾಲಕ ನಿಜಾಮ್ ಹಾಗೂ ಅವರ ಜೊತೆಗಿದ್ದ ಸಹ ಪ್ರಯಾಣಿಕ ಮುಫಿಜ್ ಗಂಭೀರ ಗಾಯಗೊಂಡಿದ್ದಾರೆ.

 

ತಕ್ಷಣವೇ ಇಬ್ಬರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಲಾರಿಯ ಹಿಂಭಾಗದ ಬಲಭಾಗಕ್ಕೂ ಅಲ್ಪ ಪ್ರಮಾಣದ ಹಾನಿಯಾಗಿದೆ ಎಂದು ತಿಳಿದುಬಂದಿದೆ.