ದಿಂಡೋರಿ (ಮಧ್ಯಪ್ರದೇಶ): ರಸಗುಲ್ಲಾದಂತೆ ಕಾಣುತ್ತಿದ್ದ ಸ್ಫೋಟಕ ವಸ್ತುವನ್ನು ಸಿಹಿತಿಂಡಿ ಎಂದು ಭಾವಿಸಿ ಬಾಯಿಗೆ ಹಾಕಿಕೊಂಡ ವ್ಯಕ್ತಿಯೊಬ್ಬರು ಅದು ಸ್ಫೋಟಗೊಂಡ ಪರಿಣಾಮ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು 35 ವರ್ಷದ ರಾಜೇಂದ್ರ ಬರೌಟಿಯಾ ಎಂದು ಗುರುತಿಸಲಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಂಗಳವಾರ ರಾತ್ರಿ ಸುಮಾರು 8 ಗಂಟೆಗೆ ಛಾಂತಾ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.
ರಾಜೇಂದ್ರ ಅವರು ಕೆಲವರೊಂದಿಗೆ ಬೆಂಕಿ ಕಾಯಿಸಿಕೊಳ್ಳುತ್ತ ಕುಳಿತಿದ್ದ ವೇಳೆ ಅವರ ಸ್ನೇಹಿತ ರಾಮ್ ಭಗತ್ ಎಂಬಾತ ರಸಗುಲ್ಲಾದಂತೆ ಕಾಣುವ ಸ್ಫೋಟಕ ವಸ್ತುವನ್ನು ತಮಾಷೆಯಾಗಿ ಅವರ ಬಾಯಿಗೆ ಹಾಕಿದ್ದಾನೆ ಎನ್ನಲಾಗಿದೆ. ಇಬ್ಬರೂ ಮಾತನಾಡುತ್ತಾ ಹಾಸ್ಯ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ದಿಂಡೋರಿ ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ನಾಗುರೆ ಮಾಹಿತಿ ನೀಡಿದ್ದಾರೆ.
ಸ್ನೇಹಿತ ನೀಡಿದ ವಸ್ತುವನ್ನು ರಾಜೇಂದ್ರ ಅವರು ಕಚ್ಚಿದ ತಕ್ಷಣ ಅದು ಭಾರೀ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಅವರನ್ನು ಕೂಡಲೇ ದಿಂಡೋರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಪರೀಕ್ಷಿಸಿದ ಬಳಿಕ ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.
ಕಾಡುಹಂದಿ ಬೇಟೆಗೆ ಬಳಸುವ ಕಚ್ಚಾ ಸ್ಫೋಟಕ:
ಸ್ಥಳೀಯ ಗ್ರಾಮೀಣ ಹಾಗೂ ಬುಡಕಟ್ಟು ಸಮುದಾಯದ ಕೆಲವು ಭಾಗಗಳಲ್ಲಿ ಕಾಡುಹಂದಿಗಳನ್ನು ಬೇಟೆಯಾಡಲು ಇಂತಹ ಅಪಾಯಕಾರಿ ಸ್ಫೋಟಕಗಳನ್ನು ಬಳಸಲಾಗುತ್ತದೆ. ಪಟಾಕಿ ಅಥವಾ ಕಲ್ಲುಗಣಿಗಳಿಂದ ಸಂಗ್ರಹಿಸಿದ ಸಿಡಿಮದ್ದನ್ನು ಹಿಟ್ಟಿನ ಉಂಡೆಗಳೊಳಗೆ ತುಂಬಿ ಇವುಗಳನ್ನು ಸಿದ್ಧಪಡಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜೇಂದ್ರ ಅವರಿಗೆ ಈ ಸ್ಫೋಟಕವನ್ನು ಕೇವಲ ತಮಾಷೆಗಾಗಿ ನೀಡಲಾಗಿತ್ತೇ ಅಥವಾ ಅವರ ಜೀವ ತೆಗೆಯುವ ಉದ್ದೇಶವಿತ್ತೇ ಎಂಬುದನ್ನು ತನಿಖೆಯ ಬಳಿಕವಷ್ಟೇ ಸ್ಪಷ್ಟಪಡಿಸಲು ಸಾಧ್ಯ ಎಂದು ಪೊಲೀಸ್ ಅಧಿಕಾರಿ ರೇಖಾ ಸಿಂಗ್ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ್ ಭಗತ್ ಬರೋಟಿಯಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105 ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆ ಉದ್ದೇಶವಿಲ್ಲದ ನರಹತ್ಯೆ ಆರೋಪದಡಿ ತನಿಖೆ ಮುಂದುವರಿದಿದೆ.





