16 November 2026 |

ಆನ್‌ಲೈನ್ ಪಾರ್ಟ್‌ಟೈಮ್ ಕೆಲಸದ ಹೆಸರಿನಲ್ಲಿ ವಂಚನೆ: ಯುವಕನಿಗೆ 4.49 ಲಕ್ಷ ರೂ. ನಷ್ಟ

  • 15 Nov 2026 10:20:14 AM

ಮಂಗಳೂರು: ಮನೆಯಿಂದಲೇ ಕುಳಿತು ಪಾರ್ಟ್‌ಟೈಮ್ ಕೆಲಸ ಮಾಡಿ ಹೆಚ್ಚಿನ ಆದಾಯ ಗಳಿಸಬಹುದು ಎಂಬ ಆಮಿಷವೊಡ್ಡಿ, ಫ್ಲಿಪ್‌ಕಾರ್ಟ್ ಪ್ರಾಡಕ್ಟ್ ಟಾಸ್ಕ್ ಹಾಗೂ ಬೋನಸ್ ಟಾಸ್ಕ್‌ಗಳ ಹೆಸರಿನಲ್ಲಿ ಯುವಕನೊಬ್ಬರಿಂದ ಬರೋಬ್ಬರಿ 4.49 ಲಕ್ಷ ರೂ. ಹಣ ಪಡೆದು ವಂಚಿಸಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ದೂರುದಾರರಾದ 28 ವರ್ಷದ ಯುವಕ ಹೈನುಗಾರಿಕೆ ಮತ್ತು ಕೃಷಿ ಚಟುವಟಿಕೆಗಳ ಮೂಲಕ ಜೀವನ ನಡೆಸುತ್ತಿದ್ದರು. ಹೆಚ್ಚುವರಿ ಆದಾಯ ಗಳಿಸುವ ಉದ್ದೇಶದಿಂದ ಅವರು ಪಾರ್ಟ್‌ಟೈಮ್ ಉದ್ಯೋಗದ ಹುಡುಕಾಟದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ Shine.com ವೆಬ್‌ಸೈಟ್‌ನಲ್ಲಿ ತಮ್ಮ ರೆಸ್ಯೂಮ್ ಅಪ್‌ಲೋಡ್ ಮಾಡಿದ್ದರು.

 

ನಂತರ ನವೆಂಬರ್ 3ರಂದು ಅವರ ಮೊಬೈಲ್ ಸಂಖ್ಯೆಯನ್ನು 'ap5t' ಎಂಬ ಹೆಸರಿನ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಲಾಗಿತ್ತು. ಬಳಿಕ ನೇಹಾ ಶರ್ಮಾ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡ ಮಹಿಳೆಯೊಬ್ಬರು ಯುವಕನನ್ನು ಸಂಪರ್ಕಿಸಿದ್ದರು. ತಾನು iProspect India ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ ಆಕೆ, ಮನೆಯಿಂದಲೇ ಕೆಲಸ ಮಾಡುವ ಅವಕಾಶವಿದೆ ಎಂದು ತಿಳಿಸಿದ್ದಳು.

 

ಕಂಪೆನಿಯಿಂದ ನೀಡಲಾಗುವ ವಿವಿಧ ಆನ್‌ಲೈನ್ ಟಾಸ್ಕ್‌ಗಳನ್ನು ಪೂರ್ಣಗೊಳಿಸಿದರೆ ಪ್ರತಿದಿನ 50ರಿಂದ 200 ರೂ.ವರೆಗೆ ಹಣ ಗಳಿಸಬಹುದು ಎಂದು ನಂಬಿಸಿದ್ದಳು. ಆಕೆಯ ಮಾತುಗಳನ್ನು ವಿಶ್ವಾಸಿಸಿದ ಯುವಕ ಆರಂಭದಲ್ಲಿ ನೀಡಲಾದ ಟಾಸ್ಕ್‌ಗಳನ್ನು ಪೂರ್ಣಗೊಳಿಸಿದ್ದರು. ಇದಕ್ಕೆ ಪ್ರತಿಯಾಗಿ ಅವರಿಗೆ ಸ್ವಲ್ಪ ಹಣವನ್ನೂ ಪಾವತಿಸಲಾಗಿತ್ತು.

 

ಇದರಿಂದಾಗಿ ಆನ್‌ಲೈನ್ ಕೆಲಸದ ಬಗ್ಗೆ ಯುವಕನಿಗೆ ನಂಬಿಕೆ ಮೂಡಿತ್ತು. ಇದೇ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡ ವಂಚಕರು ನವೆಂಬರ್ 4ರಂದು ಫ್ಲಿಪ್‌ಕಾರ್ಟ್ ಬೋನಸ್ ಟಾಸ್ಕ್ ಹೆಸರಿನಲ್ಲಿ ಹೊಸ ಯೋಜನೆಯನ್ನು ಪರಿಚಯಿಸಿದ್ದರು. ಇದರಲ್ಲಿ 1,000 ರೂ.ನಿಂದ 18,000 ರೂ.ವರೆಗೆ ಹಣ ಹೂಡಿಕೆ ಮಾಡಿದರೆ 1,200 ರೂ. ಲಾಭಾಂಶ ಪಡೆಯಬಹುದು ಎಂದು ಆಮಿಷವೊಡ್ಡಿದ್ದರು.

 

ಆರಂಭದಲ್ಲಿ ಕಡಿಮೆ ಮೊತ್ತದ ಹಣ ಹೂಡಿಕೆ ಮಾಡಿದಾಗ ಲಾಭದ ರೂಪದಲ್ಲಿ ಹಣ ಮರಳಿದ್ದರಿಂದ ಯುವಕ ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿ ಮುಂದುವರಿದಿದ್ದರು. ಹೀಗಾಗಿ ನವೆಂಬರ್ 4ರಿಂದ 11ರವರೆಗಿನ ಅವಧಿಯಲ್ಲಿ ವಿವಿಧ ಹಂತಗಳಲ್ಲಿ ಒಟ್ಟು 4,49,000 ರೂ.ಗಳನ್ನು ಆರೋಪಿಗಳು ಸೂಚಿಸಿದ ಖಾತೆಗಳಿಗೆ ವರ್ಗಾಯಿಸಿದ್ದರು.

 

ಆದರೆ, ಹಣ ವರ್ಗಾಯಿಸಿದ ಬಳಿಕ ಅವರಿಗೆ ಯಾವುದೇ ಲಾಭಾಂಶ ದೊರೆಯಲಿಲ್ಲ. ಅಲ್ಲದೆ, ತಾವು ಹೂಡಿಕೆ ಮಾಡಿದ್ದ ಮೂಲ ಹಣವೂ ವಾಪಸ್ ಬಂದಿಲ್ಲ. ಇದರಿಂದ ತಾನು ಆನ್‌ಲೈನ್ ಉದ್ಯೋಗದ ಹೆಸರಿನಲ್ಲಿ ನಡೆಯುತ್ತಿದ್ದ ವಂಚನೆಗೆ ಬಲಿಯಾಗಿರುವುದು ಯುವಕನಿಗೆ ಅರಿವಾಗಿದೆ.

 

ಈ ಹಿನ್ನೆಲೆಯಲ್ಲಿ ಹಣ ಹೂಡಿಕೆ ಮಾಡಿಸಿಕೊಳ್ಳುವ ಮೂಲಕ ವಂಚಿಸಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ಯುವಕ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.