ಮಂಗಳೂರು: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್ 27ರಿಂದ ನಾಪತ್ತೆಯಾಗಿದ್ದ ಉತ್ತರ ಪ್ರದೇಶ ಮೂಲದ 25 ವರ್ಷದ ಮನೀಶ್ ಶರ್ಮಾ ಅವರ ಮೃತದೇಹದ ಅವಶೇಷಗಳು ನವೆಂಬರ್ 13ರಂದು ಹಳೆ ವಿಮಾನ ನಿಲ್ದಾಣ ರಸ್ತೆಯ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿವೆ. ಈ ಘಟನೆ ಕೊಲೆ ಶಂಕೆಗೆ ಕಾರಣವಾಗಿದ್ದು, ಮೃತ ಯುವಕನ ಅಣ್ಣ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನೀಶ್ ಅವರ ಅಣ್ಣ ಸೋನು ಶರ್ಮಾ ಅವರು ತಮ್ಮ ಸಹೋದರನ ಸಾವಿನ ಹಿಂದೆ ಕೊಲೆ ನಡೆದಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮನೀಶ್ ಅವರೊಂದಿಗೆ ಒಂದೇ ಕೊಠಡಿಯಲ್ಲಿ ವಾಸವಿದ್ದ ಶ್ರವಣ್ ಎಂಬಾತನ ಮೇಲೆ ಅನುಮಾನವಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಮನೀಶ್ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೋಮಸುಂದರ್ ಎಂಬುವವರ ಬಳಿ ಹಿಟಾಚಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಅವರ ಅಣ್ಣ ಸೋನು ಅಕ್ಟೋಬರ್ 27ರಂದು ಮನೀಶ್ಗೆ ದೂರವಾಣಿ ಕರೆ ಮಾಡಿದ್ದರು. ಆದರೆ, ಆ ಸಮಯದಲ್ಲಿ ಮನೀಶ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ಇದೇ ದಿನ ರಾತ್ರಿ ಸೋಮಸುಂದರ್ ಅವರು ಸೋನುಗೆ ಕರೆ ಮಾಡಿ, ಮನೀಶ್ ಅಂದು ಕೆಲಸ ಮುಗಿಸಿ ಸಂಜೆ ತನ್ನ ಸ್ನೇಹಿತ ಶ್ರವಣ್ ಜೊತೆ ಹೊರಗೆ ಹೋಗಿದ್ದು, ನಂತರ ವಾಪಸ್ ಬಂದಿಲ್ಲ. ಅವರ ಮೊಬೈಲ್ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಮಾಹಿತಿ ನೀಡಿದ್ದರು.
ಈ ವಿಚಾರ ತಿಳಿದ ಸೋನು ಅಕ್ಟೋಬರ್ 30ರಂದು ಬಜಪೆಗೆ ಆಗಮಿಸಿ, ಮನೀಶ್ ವಾಸವಿದ್ದ ಕೊಠಡಿಗೆ ಭೇಟಿ ನೀಡಿದ್ದರು. ಅಲ್ಲಿ ಬಿಹಾರ ಮೂಲದ ಬೈಜುಲಾಲ್ ಎಂಬುವವರನ್ನು ಭೇಟಿಯಾಗಿ ಸಹೋದರನ ಬಗ್ಗೆ ವಿಚಾರಿಸಿದ್ದರು.
ಆಗ ಬೈಜುಲಾಲ್ ನೀಡಿದ ಮಾಹಿತಿ ಪ್ರಕಾರ, ಅಕ್ಟೋಬರ್ 27ರ ಸಂಜೆ ಮನೀಶ್ ಮತ್ತು ಶ್ರವಣ್ ಇಬ್ಬರೂ ಊಟಕ್ಕೆಂದು ಹೊರಗೆ ಹೋಗಿದ್ದರು. ಆದರೆ, ಸ್ವಲ್ಪ ಸಮಯದ ಬಳಿಕ ಶ್ರವಣ್ ಮಾತ್ರ ಕೊಠಡಿಗೆ ಹಿಂದಿರುಗಿದ್ದ. ಮನೀಶ್ ಬಗ್ಗೆ ಪ್ರಶ್ನಿಸಿದಾಗ ಆತ ಊರಿಗೆ ತೆರಳಿದ್ದಾನೆ ಎಂದು ಹೇಳಿದ್ದ. ಬಳಿಕ ತಾನೂ ಊರಿಗೆ ಹೋಗುವುದಾಗಿ ತಿಳಿಸಿ, ಬೈಕಿನಲ್ಲಿ ತನ್ನನ್ನು ಬಿಟ್ಟು ಬರುವಂತೆ ಕೇಳಿಕೊಂಡಿದ್ದ. ಅದರಂತೆ ಬೈಜುಲಾಲ್ ಆತನನ್ನು ಬೈಕಿನಲ್ಲಿ ಕರೆದುಕೊಂಡು ಹೋಗಿ ಬಿಟ್ಟಿದ್ದರು.
ನಂತರ ಸೋನು ಅವರು ಬಜಪೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಹೋದರನಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ನವೆಂಬರ್ 1ರಂದು ಬಜಪೆ ಪೊಲೀಸ್ ಠಾಣೆಯಲ್ಲಿ ಮನೀಶ್ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.
ಈ ನಡುವೆ ಮನೀಶ್ ಯಾವುದಾದರೂ ಹಣಕಾಸಿನ ವ್ಯವಹಾರದಲ್ಲಿ ಸಿಲುಕಿಕೊಂಡಿದ್ದಾರೆಯೇ ಎಂಬ ಅನುಮಾನದಿಂದ ಸೋನು ಅವರು ಊರಿನಲ್ಲಿದ್ದ ತಂದೆಯನ್ನು ಸಂಪರ್ಕಿಸಿ, ಮನೀಶ್ ಅವರ ಬ್ಯಾಂಕ್ ಖಾತೆಯ ವಹಿವಾಟುಗಳ ಮಾಹಿತಿ ಪಡೆದುಕೊಂಡಿದ್ದರು. ಖಾತೆಯನ್ನು ಪರಿಶೀಲಿಸಿದಾಗ ಅಕ್ಟೋಬರ್ 27ರಂದು ರಾಜನ್ ಎಂಬುವವರ ಖಾತೆಗೆ 63,720 ರೂಪಾಯಿ ವರ್ಗಾವಣೆಯಾಗಿರುವುದು ಗೊತ್ತಾಗಿತ್ತು.
ಈ ಬಗ್ಗೆ ರಾಜನ್ ಅವರನ್ನು ಸಂಪರ್ಕಿಸಿ ವಿಚಾರಿಸಿದಾಗ, ಮನೀಶ್ ಅವರಿಂದ ಬಂದ ಹಣವನ್ನು ತಾನು ಶ್ರವಣ್ಗೆ ವರ್ಗಾಯಿಸಿರುವುದಾಗಿ ಅವರು ತಿಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ಪ್ರಕರಣದ ಬಗ್ಗೆ ಮತ್ತಷ್ಟು ಅನುಮಾನಗಳು ಮೂಡಿದ್ದವು.
ಇನ್ನೊಂದೆಡೆ ಪೊಲೀಸರು ಬಜಪೆ ವ್ಯಾಪ್ತಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅಕ್ಟೋಬರ್ 27ರಂದು ಮನೀಶ್ ಮತ್ತು ಶ್ರವಣ್ ಇಬ್ಬರೂ ಒಂದೇ ಬೈಕಿನಲ್ಲಿ ತೆರಳಿರುವುದು ಕಂಡುಬಂದಿದೆ. ಆದರೆ, ಬಳಿಕ ಶ್ರವಣ್ ಒಬ್ಬನೇ ಹಿಂದಿರುಗಿರುವುದು ದೃಶ್ಯಾವಳಿಗಳಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ.
ನವೆಂಬರ್ 13ರಂದು ಹಳೆ ವಿಮಾನ ನಿಲ್ದಾಣ ರಸ್ತೆಯ ನಿರ್ಜನ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದ ವೇಳೆ ದುರ್ವಾಸನೆ ಬರುತ್ತಿರುವುದು ಗಮನಕ್ಕೆ ಬಂದಿದೆ. ಪರಿಶೀಲನೆ ನಡೆಸಿದಾಗ ಅಲ್ಲಿ ಮಾನವ ಅಸ್ಥಿಪಂಜರದ ತುಂಡುಗಳು, ತಲೆಬುರುಡೆಯ ಅವಶೇಷಗಳು ಪತ್ತೆಯಾಗಿವೆ. ಅವುಗಳ ಸಮೀಪದಲ್ಲೇ ಶರ್ಟ್ ಮತ್ತು ಪ್ಯಾಂಟ್ ಕೂಡ ಬಿದ್ದಿದ್ದವು.
ಸ್ಥಳದಲ್ಲಿ ದೊರೆತ ಬಟ್ಟೆಗಳನ್ನು ಪರಿಶೀಲಿಸಿದ ಸೋನು ಶರ್ಮಾ ಅವರು ಅವು ತಮ್ಮ ಸಹೋದರ ಮನೀಶ್ಗೆ ಸೇರಿದ್ದವು ಎಂದು ಗುರುತಿಸಿದ್ದಾರೆ ಎನ್ನಲಾಗಿದೆ.
ತಮ್ಮ ಸಹೋದರನನ್ನು ಯಾವುದೋ ದುರುದ್ದೇಶದಿಂದ ಹತ್ಯೆ ಮಾಡಿರುವ ಶಂಕೆಯಿದ್ದು, ಈ ಕೃತ್ಯದಲ್ಲಿ ಶ್ರವಣ್ ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಸೋನು ದೂರಿನಲ್ಲಿ ಆರೋಪಿಸಿದ್ದಾರೆ. ಆರೋಪಿಯನ್ನು ಪತ್ತೆಹಚ್ಚಿ, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ. ಆರೋಪದ ಸತ್ಯಾಸತ್ಯತೆ ಮತ್ತು ಸಾವಿಗೆ ನಿಖರ ಕಾರಣ ತನಿಖೆಯಿಂದ ತಿಳಿದುಬರಬೇಕಿದೆ.





