16 November 2026 |

ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: 14 ವರ್ಷದ ವಿದ್ಯಾರ್ಥಿ ಸಾವು

  • 15 Nov 2026 04:58:51 PM

ಬಂಟ್ವಾಳ: ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ 14 ವರ್ಷದ ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬೆಂಜನಪದವು ಸಮೀಪದ ಕಲ್ಪಣೆ ಎಂಬಲ್ಲಿ ನಡೆದಿದೆ.

 

ಮೃತ ವಿದ್ಯಾರ್ಥಿಯನ್ನು ಅಮ್ಮಾಡಿ ದೇವಿನಗರ ಲೋರಿಬೆಟ್ಟು ನಿವಾಸಿ ಸುಚಿನ್ ಎಸ್ (14) ಎಂದು ಗುರುತಿಸಲಾಗಿದೆ.

 

ನವೆಂಬರ್ 14ರಂದು ರಾತ್ರಿ ಸುಮಾರು 9 ಗಂಟೆಗೆ ಸುಚಿನ್ ಬೈಕ್‌ನಲ್ಲಿ ಬೆಂಜನಪದವಿನಿಂದ ಪೊಳಲಿ ಕಡೆಗೆ ಪ್ರಯಾಣಿಸುತ್ತಿದ್ದನು. ಈ ವೇಳೆ ಕಲ್ಪಣೆ ಸಮೀಪ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಆತನ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸುಚಿನ್ ಗಂಭೀರವಾಗಿ ಗಾಯಗೊಂಡಿದ್ದನು.

 

ಘಟನೆ ನಡೆದ ತಕ್ಷಣ ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ವೈದ್ಯರು ಚಿಕಿತ್ಸೆ ನೀಡಿದರೂ ಆತನ ಸ್ಥಿತಿ ಸುಧಾರಿಸಲಿಲ್ಲ. ಕೊನೆಗೆ ನವೆಂಬರ್ 15ರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸುಚಿನ್ ಮೃತಪಟ್ಟಿದ್ದಾನೆ.

 

14 ವರ್ಷದ ವಿದ್ಯಾರ್ಥಿಯ ಅಕಾಲಿಕ ಸಾವಿನಿಂದ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ದುಃಖ ಆವರಿಸಿದೆ.