ಮಂಗಳೂರು: ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡು ವಿದೇಶದಿಂದ ದುಬಾರಿ ಉಡುಗೊರೆಗಳನ್ನು ಕಳುಹಿಸುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿಯೊಬ್ಬ ಮಂಗಳೂರು ಮೂಲದ ಮಹಿಳೆಗೆ ಸುಮಾರು 8.50 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ಮಹಿಳೆ 2021ರಲ್ಲಿ ಸ್ಟಾರ್ ಮೇಕರ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಅದರ ಸದಸ್ಯತ್ವ ಪಡೆದಿದ್ದರು. ಸುಮಾರು ಎರಡು ತಿಂಗಳ ಹಿಂದೆ ಇದೇ ಆ್ಯಪ್ನಲ್ಲಿ 'ಕ್ರಿಸ್ ಪಾವ್' ಎಂಬ ಹೆಸರಿನಲ್ಲಿ ವ್ಯಕ್ತಿಯೊಬ್ಬ ಪರಿಚಯವಾಗಿದ್ದ. ತಾನು ಯುನೈಟೆಡ್ ಕಿಂಗ್ಡಮ್ನಲ್ಲಿ ವಾಸಿಸುತ್ತಿರುವುದಾಗಿ ಹೇಳಿಕೊಂಡು ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ್ದ. ಬಳಿಕ ಆಕೆಯ ಮೊಬೈಲ್ ಸಂಖ್ಯೆ ಪಡೆದು, +447516106856 ಸಂಖ್ಯೆಯಿಂದ ವಾಟ್ಸ್ಆ್ಯಪ್ ಮೂಲಕ ಸಂಪರ್ಕದಲ್ಲಿದ್ದ.
ನವೆಂಬರ್ 11ರಂದು ಮಹಿಳೆ ತನ್ನ ಮಗುವಿನ ಹುಟ್ಟುಹಬ್ಬದ ಬಗ್ಗೆ ತಿಳಿಸಿದ ಸಂದರ್ಭದಲ್ಲಿ, ಡಾಲರ್ಗಳು, ಚಿನ್ನಾಭರಣ ಸೇರಿದಂತೆ ಹಲವು ದುಬಾರಿ ಉಡುಗೊರೆಗಳನ್ನು ಕಳುಹಿಸುವುದಾಗಿ ಆತ ಭರವಸೆ ನೀಡಿದ್ದ. ಉಡುಗೊರೆಗಳ ಚಿತ್ರಗಳನ್ನು ವಾಟ್ಸ್ಆ್ಯಪ್ನಲ್ಲಿ ಕಳುಹಿಸಿ, ಅವುಗಳನ್ನು ಡೆಲ್ಟಾ ಎಕ್ಸ್ಪ್ರೆಸ್ ಡೆಲಿವರಿ ಸರ್ವಿಸ್ ಮೂಲಕ ಪಾರ್ಸೆಲ್ ಮಾಡಿರುವುದಾಗಿ ತಿಳಿಸಿದ್ದ. ಪಾರ್ಸೆಲ್ಗೆ ಸಂಬಂಧಿಸಿದ ಸ್ಲಿಪ್ನ ಚಿತ್ರವನ್ನೂ ಮಹಿಳೆಗೆ ಕಳುಹಿಸಿದ್ದ.
ಡೆಲಿವರಿ ಶುಲ್ಕದ ನೆಪದಲ್ಲಿ ಹಣ ವಸೂಲಿ;
ಇದರ ಬೆನ್ನಲ್ಲೇ ನವೆಂಬರ್ 9ರಂದು ಮಹಿಳೆಗೆ ಮತ್ತೊಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಮುಂಬೈನ ಡೆಲ್ಟಾ ಎಕ್ಸ್ಪ್ರೆಸ್ ಡೆಲಿವರಿ ಸರ್ವಿಸ್ನ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಯುನೈಟೆಡ್ ಕಿಂಗ್ಡಮ್ನಿಂದ ಮಹಿಳೆಯ ಹೆಸರಿನಲ್ಲಿ ಪಾರ್ಸೆಲ್ ಬಂದಿರುವುದಾಗಿ ತಿಳಿಸಿದ್ದ.
ಪಾರ್ಸೆಲ್ ಪಡೆಯಲು ಸರ್ವಿಸ್ ಶುಲ್ಕದ ಜೊತೆಗೆ ಭಾರತ ಸರ್ಕಾರದ ಆದಾಯ ತೆರಿಗೆ ಮತ್ತು ಭಯೋತ್ಪಾದನಾ ನಿಗ್ರಹ ಅನುಮತಿ ಪ್ರಮಾಣಪತ್ರದ ಹೆಸರಿನಲ್ಲಿ ಹಣ ಪಾವತಿಸಬೇಕೆಂದು ಸೂಚಿಸಿದ್ದ. ಇದನ್ನು ನಂಬಿದ ಮಹಿಳೆ, ಅಪರಿಚಿತರು ನೀಡಿದ ಬ್ಯಾಂಕ್ ಖಾತೆಗೆ ನವೆಂಬರ್ 13ರಿಂದ 20ರವರೆಗೆ ವಿವಿಧ ಹಂತಗಳಲ್ಲಿ ಒಟ್ಟು ಸುಮಾರು 8.50 ಲಕ್ಷ ರೂ. ವರ್ಗಾಯಿಸಿದ್ದರು.
ಹಣ ಪಾವತಿಸಿದ ಬಳಿಕವೂ ಪಾರ್ಸೆಲ್ ತಲುಪದಿದ್ದರಿಂದ ಮಹಿಳೆಗೆ ಅನುಮಾನ ಮೂಡಿದೆ. ಸಂಬಂಧಪಟ್ಟವರಿಂದ ಯಾವುದೇ ಸಮರ್ಪಕ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ತಾನು ವಂಚನೆಗೆ ಒಳಗಾಗಿರುವುದನ್ನು ಅರಿತು ಮಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.





