ವಿಟ್ಲ: ಕಲ್ಲಡ್ಕ–ಕಾಂಞಂಗಾಡ್ ರಾಷ್ಟ್ರೀಯ ಹೆದ್ದಾರಿಯ ಅಡ್ಯನಡ್ಕ ಸಮೀಪದ ಕುದ್ದುಪದವು ಎಂಬಲ್ಲಿ ಸೈಕಲ್ ಸಾಗಿಸುತ್ತಿದ್ದ ಕಂಟೈನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನಿಂದ ಕೇರಳದ ಚೆರ್ಕಳಕ್ಕೆ ಸೈಕಲ್‌ಗಳನ್ನು ಸಾಗಿಸುತ್ತಿದ್ದ KA 52 C 6569 ನೋಂದಣಿಯ ಕಂಟೈನರ್ ಲಾರಿ ಕಲ್ಲಡ್ಕದಿಂದ ವಿಟ್ಲ ಮಾರ್ಗವಾಗಿ ಸಂಚರಿಸುತ್ತಿತ್ತು. ಕರ್ನಾಟಕ–ಕೇರಳ ಗಡಿ ಭಾಗದ ಕುದ್ದುಪದವು ಬಳಿ ತಲುಪಿದಾಗ ಈ ಅಪಘಾತ ಸಂಭವಿಸಿದೆ. ವಾಹನದಲ್ಲಿ ಚಾಲಕ ಪರುಶುರಾಮ್ ಒಬ್ಬರೇ ಇದ್ದರು ಎಂದು ತಿಳಿದುಬಂದಿದೆ.
ರಸ್ತೆ ಬದಿಯಲ್ಲಿ ಪೈಪ್‌ಲೈನ್ ಕಾಮಗಾರಿಗಾಗಿ ಅಗೆಯಲಾಗಿದ್ದ ಗುಂಡಿಯಲ್ಲಿ ಲಾರಿಯ ಚಕ್ರ ಸಿಲುಕಿಕೊಂಡ ಪರಿಣಾಮ ವಾಹನದ ಮೇಲಿನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಚಾಲಕ ತಿಳಿಸಿದ್ದಾರೆ.
ಅಪಘಾತ ಸಂಭವಿಸಿದ ಸಮಯದಲ್ಲಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಕಡಿಮೆ ಇದ್ದುದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ. ಚಾಲಕನಿಗೆ ಗಾಯಗಳಾಗಿದ್ದು, ಹೆಚ್ಚಿನ ಅಪಾಯ ಉಂಟಾಗಿಲ್ಲ.





