ಉಡುಪಿ: ಜಿಲ್ಲೆಯ ಕಾಪು ಬೀಚ್‌ನಲ್ಲಿ ಸಮುದ್ರದ ಬೃಹತ್ ಅಲೆಗಳ ಅಬ್ಬರಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಇಬ್ಬರು ಯುವಕರ ಮೃತದೇಹಗಳು ಸೋಮವಾರ ಬೆಳಗ್ಗೆ ಪತ್ತೆಯಾಗಿವೆ. ಈ ದುರಂತದಿಂದ ಪ್ರವಾಸಕ್ಕೆ ಬಂದಿದ್ದ ಕುಟುಂಬಸ್ಥರಲ್ಲಿ ತೀವ್ರ ದುಃಖ ಆವರಿಸಿದೆ.
ಮೃತರನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾವಿನಕೊಪ್ಪ ನಿವಾಸಿ ಅಲ್ತಾಫ್ ಅವರ ಪುತ್ರ ಸಮೀರ್ (20) ಹಾಗೂ ದಾವಣಗೆರೆಯ ಅಹಮ್ಮದಿ ನಗರದ ನಿವಾಸಿ ಝಿಯಾವುಲ್ಲಾ ಅವರ ಪುತ್ರ ಮಲ್ಲಿಕ್ ರಿಹಾನ್ (15) ಎಂದು ಗುರುತಿಸಲಾಗಿದೆ.
ಭಾನುವಾರ ದಾವಣಗೆರೆಯಿಂದ ಒಟ್ಟು 12 ಮಂದಿ ಪ್ರವಾಸದ ಉದ್ದೇಶದಿಂದ ಕಾಪು ಬೀಚ್‌ಗೆ ಆಗಮಿಸಿದ್ದರು. ಈ ವೇಳೆ ಅವರಲ್ಲಿ ಐವರು ಸಮುದ್ರದಲ್ಲಿ ಈಜಲು ನೀರಿಗೆ ಇಳಿದಿದ್ದರು. ಆದರೆ, ಏಕಾಏಕಿ ಅಪ್ಪಳಿಸಿದ ಬೃಹತ್ ಅಲೆಗಳ ರಭಸಕ್ಕೆ ಮೂವರು ಕೊಚ್ಚಿಕೊಂಡು ಹೋಗಿದ್ದರು.
ಘಟನೆಯನ್ನು ಗಮನಿಸಿದ ತಕ್ಷಣ ಬೀಚ್‌ನಲ್ಲಿದ್ದ ಜೀವರಕ್ಷಕ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿ ಓರ್ವನನ್ನು ಸುರಕ್ಷಿತವಾಗಿ ರಕ್ಷಿಸಿದ್ದರು. ಆದರೆ, ಉಳಿದ ಇಬ್ಬರು ಸಮುದ್ರದಲ್ಲಿ ನಾಪತ್ತೆಯಾಗಿದ್ದರು.
ಇಬ್ಬರಿಗಾಗಿ ಭಾನುವಾರದಿಂದಲೇ ನಿರಂತರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಕೊನೆಗೂ ಸೋಮವಾರ ಬೆಳಗ್ಗೆ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಪ್ರವಾಸದ ಸಂತೋಷದಲ್ಲಿದ್ದ ಕುಟುಂಬಗಳಿಗೆ ಈ ಘಟನೆ ಆಘಾತ ತಂದಿದ್ದು, ಸ್ಥಳದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.





