ಮಂಗಳೂರು: ಕರಾವಳಿ ಭಾಗದ ಜನರ ಹಲವು ವರ್ಷಗಳ ಹೋರಾಟಕ್ಕೆ ಫಲ ದೊರೆತಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳು ಭಾಷೆಯನ್ನು ಆಡಳಿತಾತ್ಮಕವಾಗಿ ಬಳಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ಸಂಬಂಧ ಅನುಷ್ಠಾನಕ್ಕೆ ಅಗತ್ಯವಾದ ಆದೇಶವನ್ನೂ ಹೊರಡಿಸಲಾಗಿದೆ.
ಸರ್ಕಾರದ ಹೊಸ ಆದೇಶದಂತೆ ಇನ್ನು ಮುಂದೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ತುಳು ಭಾಷೆಯಲ್ಲಿಯೇ ಅರ್ಜಿ, ಮನವಿ ಹಾಗೂ ಇತರ ಪತ್ರಗಳನ್ನು ಸಲ್ಲಿಸಬಹುದು. ಸಾರ್ವಜನಿಕರಿಂದ ತುಳುವಿನಲ್ಲಿ ಸ್ವೀಕರಿಸುವ ಅರ್ಜಿಗಳಿಗೆ ಅಧಿಕಾರಿಗಳು ಕನ್ನಡದ ಜೊತೆಗೆ ತುಳು ಭಾಷೆಯಲ್ಲಿಯೂ ಪ್ರತಿಕ್ರಿಯೆ ನೀಡಲಿದ್ದಾರೆ.
ಅಲ್ಲದೆ, ಜಿಲ್ಲಾಧಿಕಾರಿಗಳ ಕಚೇರಿಯಿಂದ ಹೊರಡಿಸುವ ಪ್ರಮುಖ ಆದೇಶಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿರುವ ಮುಖ್ಯ ಸೂಚನಾ ಫಲಕಗಳಲ್ಲಿ ಕನ್ನಡದ ಜೊತೆಗೆ ತುಳು ಭಾಷೆಯನ್ನೂ ಬಳಸುವುದು ಕಡ್ಡಾಯವಾಗಲಿದೆ. ಆಡಳಿತಾತ್ಮಕ ವ್ಯವಹಾರಗಳಲ್ಲಿ ತುಳು ಭಾಷೆಯನ್ನು ಕನ್ನಡ ಲಿಪಿಯಲ್ಲಿಯೇ ಬರೆಯಲು ನಿರ್ಧರಿಸಲಾಗಿದೆ.
ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಪ್ರತ್ಯೇಕ ಅನುಷ್ಠಾನ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಭಾಷಾ ಬಳಕೆಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸಲು ಒಟ್ಟು 20 ಭಾಷಾಂತರಕಾರರನ್ನು ನೇಮಿಸಿಕೊಳ್ಳಲು ಸರ್ಕಾರ ಒಪ್ಪಿಗೆ ನೀಡಿದೆ.
ಇದರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿ ಕಚೇರಿಗಳಿಗೆ ತಲಾ ಇಬ್ಬರಂತೆ ನಾಲ್ವರು ಭಾಷಾಂತರಕಾರರನ್ನು ನಿಯೋಜಿಸಲಾಗುತ್ತದೆ. ಉಳಿದ 16 ಮಂದಿಯನ್ನು ಎರಡೂ ಜಿಲ್ಲೆಗಳ ತಾಲೂಕು ಕಚೇರಿಗಳಲ್ಲಿ ನೇಮಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ 9 ತಾಲೂಕುಗಳು ಹಾಗೂ ಉಡುಪಿ ಜಿಲ್ಲೆಯ 7 ತಾಲೂಕುಗಳ ತಹಶೀಲ್ದಾರ್ ಕಚೇರಿಗಳಲ್ಲಿ ತಲಾ ಒಬ್ಬರು ಭಾಷಾಂತರಕಾರರು ಕಾರ್ಯನಿರ್ವಹಿಸಲಿದ್ದಾರೆ.
ನೇಮಕಗೊಳ್ಳುವ ಭಾಷಾಂತರಕಾರರಿಗೆ ಎಲ್ಲ ಭತ್ಯೆ ಮತ್ತು ವೆಚ್ಚಗಳನ್ನು ಒಳಗೊಂಡಂತೆ ಪ್ರತಿ ತಿಂಗಳು ತಲಾ 30 ಸಾವಿರ ರೂಪಾಯಿ ಗೌರವ ಸಂಭಾವನೆ ನೀಡಲು ನಿರ್ಧರಿಸಲಾಗಿದೆ.
ಈ ಕ್ರಮದಿಂದ ಸರ್ಕಾರಿ ಆಡಳಿತದಲ್ಲಿ ತುಳು ಭಾಷೆಯ ಬಳಕೆಗೆ ಅವಕಾಶ ವಿಸ್ತಾರವಾಗಲಿದ್ದು, ಸಾರ್ವಜನಿಕರು ತಮ್ಮ ಮಾತೃಭಾಷೆಯಲ್ಲೇ ಸರ್ಕಾರಿ ಸೇವೆಗಳನ್ನು ಪಡೆಯಲು ಅನುಕೂಲವಾಗಲಿದೆ.





