ಮಂಗಳೂರು: ಶಾಲೆ ಮುಗಿಸಿ ಮನೆಗೆ ತೆರಳಲು ರಸ್ತೆ ದಾಟುತ್ತಿದ್ದ ಎರಡನೇ ತರಗತಿಯ ವಿದ್ಯಾರ್ಥಿಯೊಬ್ಬ ಖಾಸಗಿ ಬಸ್ ಡಿಕ್ಕಿಯಾಗಿ ಮೃತಪಟ್ಟಿರುವ ದುರ್ಘಟನೆ ನಗರದ ಕಂಕನಾಡಿಯಲ್ಲಿ ನಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 7 ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.
ಮೃತ ಬಾಲಕನನ್ನು ಲಕ್ಷ್ಮೀ ಕಲಹಾಲ ಅವರ ಪುತ್ರ ಎಂದು ಗುರುತಿಸಲಾಗಿದೆ. ಈತ ಕಂಕನಾಡಿಯ ಸೈಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿದ್ದನು.
ನವೆಂಬರ್ 25ರಂದು ಸಂಜೆ ಸುಮಾರು 4.15ರ ವೇಳೆಗೆ ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ಬಾಲಕ, ಶಾಲೆಯ ಮುಂಭಾಗದಲ್ಲಿರುವ ಕಂಕನಾಡಿ-ಫನ್ನೀರ್ ರಸ್ತೆಯನ್ನು ದಾಟುತ್ತಿದ್ದನು. ಇದೇ ಸಂದರ್ಭದಲ್ಲಿ ಫನ್ನೀರ್ ಕಡೆಗೆ ತೆರಳಲು ನಿಂತಿದ್ದ ಖಾಸಗಿ ಬಸ್ಸಿನ ಚಾಲಕ ಏಕಾಏಕಿ ಬಸ್ಸನ್ನು ಬಲಭಾಗಕ್ಕೆ ತಿರುಗಿಸಿ ಮುಂದಕ್ಕೆ ಚಲಾಯಿಸಿದ್ದಾನೆ ಎನ್ನಲಾಗಿದೆ.
ಈ ವೇಳೆ ಬಸ್ಸಿನ ಬಲಭಾಗ ಬಾಲಕನಿಗೆ ಬಡಿದಿದ್ದು, ಆತ ರಸ್ತೆಗೆ ಬಿದ್ದಿದ್ದಾನೆ. ಬಳಿಕ ಬಸ್ಸಿನ ಹಿಂಭಾಗದ ಬಲ ಚಕ್ರ ಬಾಲಕನ ಮೇಲೆ ಹರಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದನು.
ಕೂಡಲೇ ಬಸ್ ಚಾಲಕ ಹಾಗೂ ಸ್ಥಳೀಯರು ಗಾಯಾಳು ಬಾಲಕನನ್ನು ಸಮೀಪದ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಆದರೆ, ವೈದ್ಯರ ಚಿಕಿತ್ಸೆಯ ನಡುವೆಯೂ ಬಾಲಕನ ಸ್ಥಿತಿ ಸುಧಾರಿಸದೆ ಸಂಜೆ 5.50ರ ಸುಮಾರಿಗೆ ಮೃತಪಟ್ಟಿದ್ದಾನೆ.
ಘಟನೆಗೆ ಬಸ್ ಚಾಲಕನ ಅಜಾಗರೂಕತೆ ಮತ್ತು ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂದು ಆರೋಪಿಸಿರುವ ಬಾಲಕನ ತಾಯಿ ಲಕ್ಷ್ಮೀ ಕಲಹಾಲ, ಚಾಲಕನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.





