29 November 2026 |

ಕಾರು-ಸ್ಕೂಟರ್ ಮುಖಾಮುಖಿ ಡಿಕ್ಕಿ: ಸ್ಕೂಟರ್ ಸವಾರ ವಿಶ್ವಾಸ್ ದುರ್ಮರಣ

  • 28 Nov 2026 12:25:35 PM

ಕಡಬ: ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಅಪಘಾತದಲ್ಲಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ನವೆಂಬರ್ 27ರಂದು ಬೆಳಿಗ್ಗೆ ಬಿಳಿನೆಲೆ ಗ್ರಾಮದ ಕೋಟೆ ಹೊಳೆ ಸೇತುವೆ ಸಮೀಪ ನಡೆದಿದೆ.

 

ಮೃತರನ್ನು ಸೋಮವಾರಪೇಟೆ ನಿವಾಸಿ ವಿಶ್ವಾಸ್ (31) ಎಂದು ಗುರುತಿಸಲಾಗಿದೆ. ವಿಶ್ವಾಸ್ ಅವರು KA-01-HX-1968 ನೋಂದಣಿ ಸಂಖ್ಯೆಯ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಡಬದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ KA-12-MA-8653 ನೋಂದಣಿಯ ಕಾರು ಎದುರಿನಿಂದ ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಕಾರನ್ನು ಚಲಾಯಿಸುತ್ತಿದ್ದ ನಂದನ್ ಅವರ ಅಜಾಗರೂಕತೆ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

 

ಅಪಘಾತದ ತೀವ್ರತೆಗೆ ಸ್ಕೂಟರ್‌ನಿಂದ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ತಕ್ಷಣ ಸ್ಥಳೀಯರು ಗಾಯಾಳುವಿಗೆ ನೆರವು ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಡಬಕ್ಕೆ ಕರೆದೊಯ್ದಿದ್ದರು. ಆದರೆ, ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

 

ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 146/2026ರ ಅಡಿಯಲ್ಲಿ BNS ಕಲಂ 281 ಮತ್ತು 106ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣದ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ.