ಬಂಟ್ವಾಳ: ಅಮೃತ್ ಭಾರತ್ ಯೋಜನೆಯ ಅಡಿಯಲ್ಲಿ ಬಂಟ್ವಾಳದ ರೈಲ್ವೆ ನಿಲ್ದಾಣವು ಅತೀ ಭರದಿಂದ ನವೀಕರಣಗೊಳ್ಳುತ್ತಿದೆ. 28.49 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ.
ಕಳೆದ ವರ್ಷ 2024 ರ ಫೆಬ್ರವರಿಯಲ್ಲಿ ಈ ಕಾಮಗಾರಿಯನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಶಂಕುಸ್ಥಾಪನೆ ನಡೆಸಿದ್ದರು. ಆಗಿನ ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಬಂಟ್ವಾಳ ಶಾಸಕ ರಾಜೇಶ್ ನೈಕ್ ರವರ ಉಪಸ್ಥಿತಿಯಲ್ಲಿ ಇದರ ನವೀಕರಣದ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಈ ವರ್ಷದ ಪ್ರಾರಂಭದಲ್ಲಿ ಕಾಮಗಾರಿ ವೇಗ ಪಡೆದುಕೊಂಡಿದ್ದು, ನವವಿನ್ಯಾಸದೊಂದಿಗೆ ಕಾಮಗಾರಿ ನಡೆಯುತ್ತಿದೆ. ದ. ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಈ ಕಾಮಗಾರಿಯ ಮುಂದಾಳತ್ವ ವಹಿಸಿದ್ದಾರೆ.
ಯಾವೆಲ್ಲ ಸೌಕರ್ಯಗಳು ಹೊಸದಾಗಿ ರೈಲ್ವೆ ನಿಲ್ದಾಣದಲ್ಲಿ ದೊರೆಯಲಿದೆ ?
* ಮುಂಗಡ ಟಿಕೆಟ್ ಸಹಿತ ಬುಕಿಂಗ್ ಕೌಂಟರ್ ಸಾಕಷ್ಟು ಜಾಗದೊಂದಿಗೆ ಬರಲಿದ್ದು, ಪ್ರಯಾಣಿಕರಿಗೆ ಟಿಕೆಟ್ ಗೆ ಸಂಬಂಧಪಟ್ಟಂತೆ ಉತ್ತಮ ಸರ್ವಿಸ್ ದೊರೆಯಲಿದೆ.
* ನಿಲ್ದಾಣದ ಒಳಗಡೆ ಒಂದು ಕೆಫೆಟೇರಿಯಾ ಮತ್ತು ನಾಲ್ಕು ಕೇಟರಿಂಗ್ ಸ್ಟಾಲ್ ಗಳು ದೊರೆಯಲಿದೆ.
* ಸಂಪೂರ್ಣ ನಿಲ್ದಾಣಕ್ಕೆ ಸಿಸಿಟಿವಿ ಅಳವಡಿಸಲಾಗುವುದು.
* ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಕಾಯುವ ಕೋಣೆಯ ವ್ಯವಸ್ಥೆ ಕಲ್ಪಿಸಲಾಗಿದೆ.
* ಪ್ರತಿಯೊಂದು ಪ್ಲಾಟ್ ಫಾರಂ ನಲ್ಲಿ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಇದೆ.
* ನಿಲ್ದಾಣದ ನೆಲಕ್ಕೆ ಗ್ರಾನೈಟ್ ಹಾಸಲಾಗುವುದು ಮತ್ತು ಇತರ ಭಾಗಗಳಿಗೆ ಟೈಲ್ಸ್ ಹಾಕಲಾಗುತ್ತದೆ.
* ಉತ್ತಮ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು
* ಎಲ್ ಇ ಡಿ ಡಿಸ್ ಪ್ಲೇ ಮೂಲಕ ರೈಲಿನ ವಿವರ ನೀಡಲಾಗುವುದು.
* ಸಂಪೂರ್ಣ ಫ್ಲಾಟ್ ಫಾರಂ ಗೆ ಶೀಟ್ ಹಾಕಲಾಗುವುದು
ಮೇಲೆ ಕಾಣಿಸಿದ ಸೌಲಭ್ಯಗಳ ಜೊತೆಗೆ ಇನ್ನಿತರ ಸೇವೆಗಳನ್ನು ಕಲ್ಪಿಸುವುದರ ಮೂಲಕ ಬಿ ಸಿ ರೋಡಿನ ಪಕ್ಕ ಇರುವ ಬಂಟ್ವಾಳ ರೈಲ್ವೇ ಸ್ಟೇಷನ್ ಉತ್ತಮ ಮತ್ತು ಆಧುನಿಕ ರೀತಿಯಲ್ಲಿ ಪ್ರಯಾಣಿಕರಿಗೆ ಉತ್ತಮ ಸೇವೆ ಕಲ್ಪಿಸಲಿದೆ.