ಬೆಳ್ತಂಗಡಿ: ಸೌಜನ್ಯ ಹೋರಾಟದಲ್ಲಿ ಅಮಾಯಕರ ಹೆಸರಿನಲ್ಲಿ ದಾಖಲಾದ ಪ್ರಕರಣಗಳನ್ನು ಬಗೆಹರಿಸುತ್ತೇನೆ ಎಂದು ನಂಬಿಸಿ ಮಹಿಳೆಯೊಬ್ಬರು ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಸಂಧ್ಯಾ ಪವಿತ್ರ ನಾಗರಾಜ್ ಎಂಬವರು 'ಸೌಜನ್ಯ ಹೆಲ್ಪ್ ಲೈನ್' ಎಂಬ ಅಕೌಂಟ್ ತೆರೆದು ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನ ಮಾಲಾಡಿ ನಿವಾಸಿ ಕೆ. ರಾಜೇಶ್ ಎಂಬವರಿಗೆ ವಂಚಿಸಿದ್ದಾರೆ ಎಂದು ವರದಿಯಾಗಿದೆ.
ಕೆ. ರಾಜೇಶ್ ವೃತ್ತಿಯಲ್ಲಿ ಗಾಯಕರಾಗಿದ್ದು, ಸಂಧ್ಯಾ ಅವರಿಗೆ 2024 ರಲ್ಲಿ ಫೇಸ್ ಬುಕ್ ಮೂಲಕ ಪರಿಚಯಸ್ಥರಾದರು. ಇವರು ಅರವಿಂದ್ ವಿವೇಕ್ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಲೈವ್ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದಾರಂತೆ. ಸಂಧ್ಯಾ ಅವರು ಪರಿಚಯವಾದ ನಂತರ 'ಸೌಜನ್ಯ ಹೆಲ್ಪ್ ಲೈನ್' ಎಂಬ ಹೆಸರಿನಲ್ಲಿ ಅಮಾಯಕರ ಮೇಲೆ ಕೇಸು ದಾಖಲಾಗಿದ್ದರೆ, ಅಂತವರಿಗೆ ಕೇಸಿನಿಂದ ಮುಕ್ತಗೊಳಿಸಲು ಸಹಕರಿಸುವುದಾಗಿ ಎಂದು ಹೇಳಿ ರಾಜೇಶ್ ರವರಿಗೆ ನಂಬಿಸಿದ್ದಾಳೆ.
ರಾಜೇಶ್ ಅವರ ಮೇಲೆ ಒಂದು ಪ್ರಕರಣ ಬಂಟ್ವಾಳ ಠಾಣೆಯಲ್ಲಿ ದಾಖಲಾಗಿದ್ದರಿಂದ ಅವರು ಸಂಧ್ಯಾರವರ ಸಹಾಯವನ್ನು ಬೇಡಿದ್ದಾರೆ. ಇದಕ್ಕೆ ಪ್ರತಿಯಾಗಿ ಹೈಕೋರ್ಟ್ ನಲ್ಲಿ ಕೇಸ್ ಬಗೆಹರಿಸುತ್ತೇನೆ ಆದರೆ ಸ್ವಲ್ಪ ಖರ್ಚು ಇದೆ ಅಂತ ಹೇಳಿ ಇಲ್ಲಿಯವರೆಗೆ ಒಟ್ಟು ರೂ 3.20 ಲಕ್ಷ ಪಡೆದಿದ್ದಾಳೆ. ಹಣ ನೀಡಿದ ನಂತರವೂ ಯಾವುದೇ ಪ್ರಯೋಜನ ಸಿಗದ ಕಾರಣ ಇದೀಗ ವಂಚಿತ ರಾಜೇಶ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಸಂಧ್ಯಾ ಮತ್ತಷ್ಟು ಹಣ ಬೇಡಿಕೆ ಇಟ್ಟಿದ್ದರಿಂದ ಸಂಶಯಗೊಂಡ ರಾಜೇಶ್ ಹೈ ಕೋರ್ಟ್ ಗೆ ಸಂಬಂಧಪಟ್ಟ ದಾಖಲೆಗಳನ್ನು ತೋರಿಸಲು ಕೇಳಿಕೊಂಡಿದ್ದಾರೆ. ಅದಕ್ಕೆ ಪ್ರತಿ ಉತ್ತರವಾಗಿ ಕೈ ಕಾಲು ಮುರಿಯುವುದಾಗಿ ಬೆದರಿಕೆ ಹಾಕಿದ್ದಾಳಂತೆ. ಇದರಿಂದ ಗಲಿಬಿಲಿಗೊಂಡ ರಾಜೇಶ್ ಹತ್ತಿರದ ಪುಂಜಾಲಕಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಂಧ್ಯಾ ಪವಿತ್ರ ನಾಗರಾಜ್ ವಿರುದ್ಧ ಬಿಎನ್ಎಸ್ ಕಾಯ್ದೆ 318(4) ಮತ್ತು 351(2) ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.