ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡುವವರಿಗೆ ಗರಿಷ್ಠ ಏಳು ವರ್ಷ ಜೈಲು ಮತ್ತು 10 ಲಕ್ಷ ರೂ. ದಂಡ ವಿಧಿಸುವ ಮಸೂದೆಯು ಸಚಿವ ಸಂಪುಟದಲ್ಲಿ ಮುಂದೆ ಮಂಡನೆಯಾಗಿದೆ.
ಕಳೆದ ಗುರುವಾರ ನಡೆದ ಸಚಿವ ಸಂಪುಟದಲ್ಲಿ 'ಕರ್ನಾಟಕ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿ ನಿಷೇದ ಮಸೂದೆ' ಮಂಡನೆಯಾಗಿದೆ. ಈ ಕರಡು ಮಸೂದೆಯ ಪ್ರಕಾರ, ಒಬ್ಬರ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡುವುದು, ಆಡಿಯೋ ಅಥವಾ ವಿಡಿಯೋವನ್ನು ಸತ್ಯ ಅಥವಾ ಸಂದರ್ಭಕ್ಕೆ ಚ್ಯುತಿ ಬರುವ ಹಾಗೆ ಎಡಿಟ್ ಮಾಡುವುದು ಅಥವಾ ಸಂಪೂರ್ಣವಾಗಿ ಕಪೋಲ ಕಲ್ಪಿತ ಮಾಹಿತಿಯನ್ನು ಹಂಚಿಕೊಳ್ಳುವುದು ಇವೆಲ್ಲವೂ ಸುಳ್ಳು ಸುದ್ದಿಯ ವ್ಯಾಪ್ತಿಗೆ ಬರಲಿದೆ.
ಕನ್ನಡ ಮತ್ತು ಸಂಸ್ಕೃತಿ ಸಚಿವರ ಅಧ್ಯಕ್ಷತೆಯಲ್ಲಿ ಆರು ಮುಂದೆ ಸದಸ್ಯರನ್ನು ಒಳಗೊಂಡ ಸಾಮಾಜಿಕ ಮಾಧ್ಯಮ ಸುಳ್ಳು ಸುದ್ದಿ ನಿಯಂತ್ರಣ ಪ್ರಾಧಿಕಾರ ರಚನೆಯಾಗಲಿದೆ. ಸುಳ್ಳು ಸುದ್ದಿ ಪ್ರಕರಣಗಳ ಶೀಘ್ರ ವಿಲೇವಾರಿಗೆ ವಿಶೇಷ ನ್ಯಾಯಾಲಯಗಳನ್ನು ರಚಿಸುವ ಪ್ರಸ್ತಾವ ಕರಡು ಮಸೂದೆಯಲ್ಲಿದೆ.
ಈ ಮಸೂದೆ ಪ್ರಕಾರ ಸಾರ್ವಜನಿಕ ಅರೋಗ್ಯ, ಸಾರ್ವಜನಿಕ ಸುರಕ್ಷೆ, ಸಾರ್ವಜನಿಕ ಶಾಂತಿ ಮತ್ತು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಧಕ್ಕೆ ತರುವ ಸುದ್ದಿಯನ್ನು ಹಂಚಿಕೆ ಮಾಡಿದರೆ 2-5 ವರ್ಷಗಳ ಜೈಲು ಶಿಕ್ಷೆಯಾಗಲಿದೆ. ಮಹಿಳಾ ವಿರೋಧಿ, ಸನಾತನ ಚಿಹ್ನೆ ಮತ್ತು ನಂಬಿಕೆಗಳ ಬಗ್ಗೆ ಅಗೌರವ ತರುವ ವಿಷಯಗಳನ್ನು ನಿಷೇಧಿಸುವ ಬಗ್ಗೆಯೂ ಕರಡು ಮಸೂದೆಯಲ್ಲಿ ಪ್ರಸ್ತಾವವಿದೆ ಎನ್ನಲಾಗಿದೆ.