ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ ದೇರಾಜೆಯಲ್ಲಿ ಶುಕ್ರವಾರ ರಾತ್ರಿ ಯುವಕರ ಮೇಲೆ ತಲವಾರು ದಾಳಿ ಎಂಬ ಸುಳ್ಳು ಸುದ್ದಿ ಬಹಳ ಸಂಚಲನವನ್ನೇ ಮೂಡಿಸಿತ್ತು. ಈ ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ರವರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿದ್ದಾರೆ.
ಶುಕ್ರವಾರ ರಾತ್ರಿ 10:00 ಗಂಟೆಗೆ ಸರಿಯಾಗಿ ದೂರುದಾರ ಯುವಕ ಮೊಹಮ್ಮದ್ ಮುಕ್ಬುಲ್(34) ಬೋಳಿಯಾರ್ ನಿಂದ ಮೆಲ್ಕಾರ್ ಕಡೆ ತನ್ನ ಸಂಬಂಧಿಕರ ಬೈಕಿನಲ್ಲಿ ಹಿಂದಿನ ಸವಾರರಾಗಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ, ಸಜಿಪನಡುವಿನ ದೇರಾಜೆಯ ಬಸ್ ಸ್ಟಾಂಡ್ ಗೆ ತಲುಪಿದ್ದಾರೆ. ದೇರಾಜೆ ಬಸ್ ನಿಲ್ದಾಣದ ಹತ್ತಿರ ಬೋಳಿಯಾರ್ ಕಡೆ ಮುಖ ಮಾಡಿ ಒಂದು ಬೈಕಿನಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಹೆಲ್ಮೆಟ್ ಧರಿಸಿ ಕುಳಿತಿದ್ದು, ಅವರಲ್ಲಿ ಒಬ್ಬ ವ್ಯಕ್ತಿ ಮುಕ್ಬುಲ್ ಇರುವ ಕಡೆ ಓಡಿ ಬಂದಿದ್ದಾನಂತೆ.
ಆ ಅಪರಿಚಿತ ವ್ಯಕ್ತಿ ತನ್ನ ಕಡೆಗೆ ಓಡಿ ಬರುತ್ತಿರುವುದನ್ನು ಕಂಡು ಗಾಬರಿಗೊಂಡ ಮುಕ್ಬುಲ್ ಬೈಕ್ ಚಲಾಯಿಸುತ್ತಿದ್ದ ಸಂಬಂಧಿಕರಲ್ಲಿ ಬೈಕನ್ನು ಅತಿ ಜೋರಾಗಿ ಚಲಾಯಿಸಲು ಹೇಳಿದ್ದಾನೆ. ದೂರುದಾರ ಮುಕ್ಬುಲ್ ಹೇಳುವ ಪ್ರಕಾರ ಆತನ ಕಡೆಗೆ ಓಡಿಕೊಂಡು ಬಂದ ಅಪರಿಚಿತನ ವ್ಯಕ್ತಿಯ ಕೈಯಲ್ಲಿ ಯಾವುದೇ ಮಾರಕಾಯುಧ ಇರಲಿಲ್ಲ ಎಂದಿದ್ದಾನೆ. ನಂತರ ಮುಕ್ಬುಲ್ ನಂದಾವರದಲ್ಲಿರುವ ತಂದೆಯ ಮನೆಗೆ ತಲುಪಿ ಈ ವಿಷಯ ತಿಳಿಸಿದ್ದಾನೆ.
ಒಟ್ಟಿನಲ್ಲಿ, ದೂರುದಾರ ತಿಳಿಸಿದ ಪ್ರಕಾರ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ತಲವಾರು ದಾಳಿ ಎಂಬ ಸುಳ್ಳು ಸುದ್ದಿಗೂ, ನನಗೂ ಯಾವುದೇ ಸಂಬಂಧವಿಲ್ಲ ಮತ್ತು ನಾನು ಜನರನ್ನು ಜಮಾವಣೆಗೊಳಿಸಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಮುಕ್ಬುಲ್ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಸರಿಯಾದ ತನಿಖೆ ನಡೆಸುತ್ತಿದ್ದಾರೆ.
ಈ ಎಲ್ಲಾ ವಿಚಾರದ ಬಗ್ಗೆ ಕರ್ನಾಟಕದ ಪ್ರತಿಷ್ಠಿತ ಮಾಧ್ಯಮದಲ್ಲಿ ಬಿತ್ತರವಾಗಿದೆ ಮತ್ತು ಇದು ಒಂದು ಸುಳ್ಳು ಸುದ್ದಿ ಎಂದು ಪೊಲೀಸರು ಘೋಷಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಯಾವುದೇ ಕಾರಣಕ್ಕೂ ಸುಳ್ಳು ಸುದ್ದಿಗಳನ್ನು ಹರಡಬಾರದೆಂದು ತಿಳಿಸಿದ್ದು ಒಂದು ವೇಳೆ ಯಾರಾದರೂ ಸುಳ್ಳು ಸುದ್ದಿಗಳನ್ನು ಪೋಸ್ಟ್ ಮಾಡುವುದಾಗಲಿ ಅಥವಾ ಬೇರೆಯವರಿಗೆ ಫಾರ್ವರ್ಡ್ ಮಾಡುವುದಾಗಲಿ ಕಂಡುಬಂದಲ್ಲಿ ಕಠಿಣ ಶಿಕ್ಷೆ ನೀಡಲಾಗುವುದು ಎಂದು ತಿಳಿಸಿದ್ದಾರೆ.