ದಕ್ಷಿಣ ಕನ್ನಡ: ಬೆಳ್ತಂಗಡಿ ತಾಲೂಕಿನ ಗ್ರಾಮವೊಂದರಲ್ಲಿ ಬಹಳ ಆಶ್ಚರ್ಯಕಾರಿ ವಿಷಯವೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ವಕೀಲರ ಮುಖಾಂತರ ಪೊಲೀಸ್ ಠಾಣೆಗೆ ಪತ್ರ ಬರೆದಿದ್ದು, ಇದೀಗ ಆ ಪತ್ರ ಸಾಮಾಜಿಕ ತಾಣಗಳಲ್ಲಿ ಬಹಳಷ್ಟು ಹರಿದಾಡುತ್ತಿರುವುದು ಮಾತ್ರವಲ್ಲದೆ ದೊಡ್ಡ ಸುದ್ದಿಯಲ್ಲಿದೆ.
ಗ್ರಾಮದಲ್ಲಿ ನಡೆದ ಹಲವಾರು ಹತ್ಯೆ, ಹೆಣ್ಮಕ್ಕಳ ಅತ್ಯಾಚಾರ ಮತ್ತು ಇನ್ನಿತರ ಕೊಲೆ ಕೃತ್ಯಗಳ ಬಗ್ಗೆ ಠಾಣೆಗೆ ಬಂದು ಮಾಹಿತಿ ನೀಡುವುದಾಗಿ ಪತ್ರದ ಮೂಲಕ ತಿಳಿಸಿದ್ದಾರೆ. ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಕೊಲೆಗಳನ್ನು ಮುಚ್ಚಿಹಾಕುವ ಸಲುವಾಗಿ ಮೃತ ದೇಹಗಳನ್ನು ಹೂತು ಹಾಕುತ್ತಿದ್ದ ವ್ಯಕ್ತಿ ತನ್ನ ಪಾಪಪ್ರಜ್ಞೆಯನ್ನು ಪರಿಹರಿಸಿಕೊಳ್ಳಲು ಈ ರೀತಿಯಾಗಿ ವಕೀಲರ ಮೂಲಕ ಪತ್ರ ಬರೆದು ಬೇಡಿಕೊಂಡಿದ್ದಾನೆ.
ವಕೀಲರ ಮೂಲಕ ಬರೆಸಿದ ಪತ್ರದಲ್ಲಿ 'ಗ್ರಾಮದಲ್ಲಿ ನಡೆದಿರುವ ಹಲವಾರು ಹತ್ಯೆ ಮತ್ತು ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಕೊಲೆಗಳನ್ನು ಮುಚ್ಚಿಹಾಕುವ ಸಲುವಾಗಿ, ಮೃತ ದೇಹಗಳನ್ನು ಹೂತು ಹಾಕಿದ್ದ ವ್ಯಕ್ತಿಯೊಬ್ಬ ತನ್ನ ಪಾಪಪ್ರಜೆಯನ್ನು ಪರಿಹರಿಸಿಕೊಳ್ಳಲು ಪೊಲೀಸ್ ಠಾಣೆಗೆ ಕೂಡಲೇ ಹಾಜರಾಗಿ ಶರಣಾಗುವ ನಿರ್ಧಾರ ಮಾಡಿರುತ್ತಾನೆ. ಮತ್ತು, ತಾನು ಹೂತು ಹಾಕಿರುವ ಮೃತದೇಹಗಳನ್ನು ಪೊಲೀಸರ ಸಮ್ಮುಖದಲ್ಲಿ ಹೊರತೆಗೆಯುವ ನಿರ್ಧಾರ ಮಾಡಿರುತ್ತಾನೆ. ಇತ್ತೀಚಿಗೆ ಹೊರ ತೆಗೆದ ಕಳೇಬರೆವೊಂದನ್ನು ಪೊಲೀಸರಿಗೆ ಒಪ್ಪಿಸುವುದಾಗಿ ಹೇಳಿದ್ದಾನೆ. ಇದು ಸಾರ್ವಜನಿಕ ಮಾಹಿತಿಗಾಗಿ'. ಎಂದು ನಮೂದಿಸಲಾಗಿದೆ.
ಈಗಾಗಲೇ ಠಾಣೆಯ ಪೊಲೀಸರು ಪತ್ರವನ್ನು ಅಧಿಕೃತವಾಗಿ ಕಳುಹಿಸಿದ ವಕೀಲರನ್ನು ಸಂಪರ್ಕಿಸಿದ್ದು, ವಿವರಗಳನ್ನು ಪಡೆದುಕೊಂಡಿದ್ದಾರೆ. ವಕೀಲರ ಪ್ರಕಾರ ಗ್ರಾಮದಲ್ಲಿ ನಡೆದಿರುವ ಕೃತ್ಯ ಮತ್ತು ಅಪರಾಧಗಳ ಬಗ್ಗೆ ನನಗೆ ಮಾಹಿತಿ ಇದ್ದು, ನಾನು ಠಾಣೆಗೆ ಶರಣಾಗಿ ಮಾಹಿತಿಯನ್ನು ನೀಡಲು ಸಿದ್ದವಿರುವುದಾಗಿ ತಿಳಿಸಿರುತ್ತಾರೆ. ಆ ಮೂಲಕ ಸದ್ರಿ ವ್ಯಕ್ತಿಗೆ ಸುರಕ್ಷಿತೆಯನ್ನು ಕಲ್ಪಿಸಿ, ಆ ಬಳಿಕ ಆತನನ್ನು ಠಾಣೆಗೆ ಹಾಜರುಪಡಿಸುವುದಾಗಿ ವಕೀಲರು ತಿಳಿಸಿರುತ್ತಾರೆ.
ಆ ವ್ಯಕ್ತಿ ಠಾಣೆಗೆ ಬಂದು ಮಾಹಿತಿ ನೀಡಿದಲ್ಲಿ ಅವರಿಗೆ ಸುರಕ್ಷತೆಯನ್ನು ನೀಡಲಾಗುವುದು ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ಎಸ್ಪಿ ಡಾ. ಅರುಣ್ ತಿಳಿಸಿದ್ದಾರೆ. ಇದೀಗ ಈ ಪತ್ರ ಬಹಳ ಕುತೂಹಲವನ್ನು ಮೂಡಿಸಿದ್ದು ಮುಂದಿನ ಪ್ರಕ್ರಿಯೆ ಹೇಗೆ ನಡೆಯುತ್ತಿದೆ ಎಂಬುವುದನ್ನು ಕಾದು ನೋಡಬೇಕಾಗಿದೆ.