ಮಂಗಳೂರು: ಖಾಸಗಿ ಶಾಲೆಗೆ ಮತ್ತು ಇನ್ನಿತರ ಸಂಸ್ಥೆಗಳಿಗೆ ಇ-ಮೇಲ್ ಮೂಲಕ ಕಳುಹಿಸಿದ್ದ ಹುಸಿ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮಿಳುನಾಡಿನ ಚೆನ್ನೈ ಮೂಲದ ಮಹಿಳೆಯೊಬ್ಬರನ್ನು ಅಹಮದಾಬಾದ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ದೇಶದ ಹಲವಾರು ಕಡೆಗೆ ಹುಸಿ ಬಾಂಬ್ ಬೆದರಿಕೆ ನೀಡುತ್ತಿದ್ದ ತಮಿಳುನಾಡಿನ ಚೆನ್ನೈ ಮೂಲದ ಮಹಿಳೆಯನ್ನು ಅಹಮದಾಬಾದ್ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಬಂಧಿತ ಆರೋಪಿ ರೆನೆ ಜೋಶಿಲ್ಡಾ ಎಂಬಾಕೆ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದು, ಆಕೆ ಐಟಿ ಸಂಸ್ಥೆಯಲ್ಲಿ ಹಿರಿಯ ಸಲಹೆಗಾರೆಯಾಗಿ ಕಾರ್ಯನಿರ್ವಹಿಸುತ್ತಿದ್ದಳು ಎನ್ನುವುದು ಇಲ್ಲಿ ಕುತೂಹಲಕಾರಿ ವಿಷಯವಾಗಿದೆ.
ಯಾವೆಲ್ಲಾ ರಾಜ್ಯಗಳಲ್ಲಿ ಈಕೆ ಬೆದರಿಕೆ ಕರೆ ಮಾಡಿದ್ದಾಳೆ?
ಸೈಬರ್ ಕ್ರೈಂ ವಿಭಾಗದ ಪ್ರಕಾರ, ಈಕೆ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ದೆಹಲಿ, ರಾಜಸ್ಥಾನ, ಬಿಹಾರ, ತೆಲಂಗಾಣ, ಪಂಜಾಬ್, ಕೇರಳ, ಮಧ್ಯಪ್ರದೇಶ ಮತ್ತು ಹರಿಯಾಣ ರಾಜ್ಯಗಳನ್ನು ಸೇರಿ 12ಕ್ಕೂ ಹೆಚ್ಚು ರಾಜ್ಯಗಳಲ್ಲಿ ಒಟ್ಟು 21 ಇ-ಮೇಲ್‌ಗಳ ಮೂಲಕ ಬಾಂಬ್ ಬೆದರಿಕೆಗಳನ್ನು ನೀಡಿದ್ದಾಳೆ ಎಂದು ತಿಳಿಸಿದೆ.
ಪತ್ತೆ ಹಚ್ಚಿದ ಪ್ರಕರಣ
ಇದೆ ಜೂನ್ 3 ರಂದು, ಅಹಮದಾಬಾದ್‌ನ ಸರ್ಖೇಜ್ ಪ್ರದೇಶದ ಜಿನೇವಾ ಲಿಬರಲ್ ಶಾಲೆಗೆ ಬೆಳಿಗ್ಗೆ 10:58ಕ್ಕೆ ನಕಲಿ ಇ-ಮೇಲ್ ಐಡಿಯಿಂದ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಳು. ಈ ಹಿನ್ನೆಲೆಯಲ್ಲಿ ವಿಷ್ಣುಭಾಯಿ ಚಮನ್‌ಭಾಯಿ ಖಖಾಡಿಯಾ ಎಂಬವರು ಪೊಲೀಸರಿಗೆ ದೂರು ನೀಡಿದ್ದರು.
ಜಂಟಿ ಪೊಲೀಸ್ ಆಯುಕ್ತ ಶರದ್ ಸಿಂಘಾಲ್, ಡಿಸಿಪಿ ಡಾ. ಲವಿನಾ ಸಿನ್ಹಾ ಹಾಗೂ ಎಸಿಪಿ ಹಾರ್ದಿಕ್ ಮಕಾಡಿಯಾ ನೇತೃತ್ವದಲ್ಲಿ ಸೈಬರ್ ಕ್ರೈಂ ತಂಡ ತನಿಖೆ ನಡೆಸಿ, ಮಹಿಳೆಯ ಸ್ಥಳ ಮತ್ತು ಗುರುತನ್ನು ಪತ್ತೆ ಹಚ್ಚಿದರು. ನಿಖರ ಪುರಾವೆಗಳ ಆಧಾರದಲ್ಲಿ ಚೆನ್ನೈಗೆ ತಂಡ ಕಳುಹಿಸಿ ಆರೋಪಿಯನ್ನು ಬಂಧಿಸಲಾಯಿತು.
ಹೆಚ್ಚಿನ ತನಿಖೆಗೆ ಉಡುಪಿಗೆ
ಉಡುಪಿಗೆ ಬಂಧಿತ ಆರೋಪಿ ರೆನೆ ಜೋಶಿಲ್ಡಾ ಅವರನ್ನು ಕರೆ ತಂದು ತನಿಖೆ ನಡೆಸುವುದಾಗಿ ಉಡುಪಿ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ಅಹಮದಾಬಾದ್ ತನಿಖೆ ಸಂಪೂರ್ಣವಾದ ನಂತರ ಕರ್ನಾಟಕ್ಕೆ ಕರೆ ತಂದು ತನಿಖೆ ನಡೆಸಲಿದ್ದಾರೆ.