ಮಂಗಳೂರು: ಇಸ್ರೇಲ್ ಮತ್ತು ಇರಾನ್ ಯುದ್ಧ ಸಂಘರ್ಷದ ಕಾರಣ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಬರುವ ವಿಮಾನಗಳ ಕಾರ್ಯಾಚರಣೆಯಲ್ಲಿ ಅಡಚಣೆಗಳನ್ನು ಉಂಟುಮಾಡಿದೆ. ನಿನ್ನೆ ರಾತ್ರಿ ಕತಾರ್ ಅಮೆರಿಕ ಸೇನಾ ನೆಲೆಗೆ ಇರಾನ್ ದಾಳಿ ನಡೆಸಿದ ನಂತರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.
ಕೆಲ ಮಧ್ಯಪ್ರಾಚ್ಯ ದೇಶಗಳು ವಾಯುಪ್ರದೇಶದ ನಿರ್ಬಂಧಗಳನ್ನು ಹೇರಿದ ಪರಿಣಾಮ ಹಲವಾರು ವಿಮಾನಗಳ ನಿಗದಿತ ಸೇವೆಗಳಿಗೆ ಅಡ್ಡಿಯುಂಟಾಗಿದೆ. ನಿನ್ನೆ ಮಂಗಳೂರಿನಿಂದ ಹೊರಟಿದ್ದ ವಿಮಾನಗಳನ್ನು ಬೇರೆ ಕಡೆಗೆ ತಿರುಗಿಸಲಾದ ಬಗ್ಗೆ ವರದಿಯಾಗಿತ್ತು.
ಅಬುಧಾಬಿ ಮತ್ತು ದುಬೈಯಿಂದ ತಲಾ 1 ಇಂಡಿಗೋ ವಿಮಾನಗಳು, ದುಬೈನಿಂದ 1 ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಮತ್ತು ದಮಾಮ್ ನಿಂದ 1 ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಹಾರಾಟವನ್ನು ರದ್ದುಗೊಳಿಸಲಾಗಿದೆ ಅಥವಾ ದಿಕ್ಕನ್ನು ಬದಲಾಯಿಸಲಾಗಿದೆ ಎಂದು ತಿಳಿದುಬಂದಿದೆ.
ಅದೇ ಪ್ರಕಾರ, ಮಂಗಳೂರಿಂದ ದಮಾಮ್ ಗೆ ಹೋಗುವ ಏರ್ ಇಂಡಿಯಾ ಎಕ್ಸ್ ಪ್ರೆಸ್, ಮಂಗಳೂರಿನಿಂದ ದುಬೈಗೆ ಹೊರಟಿದ್ದ ಮತ್ತೊಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ರದ್ದುಗೊಳಿಸಲಾಗಿದೆ.
ನಿನ್ನೆ ಕತಾರ್ ನಲ್ಲಿ ನಡೆದ ದಾಳಿಯ ಸಮಯದಲ್ಲಿ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದ ಇಂಡಿಗೋ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು.
ಇಸ್ರೇಲ್ ಮತ್ತು ಇರಾನ್ ಸಂಘರ್ಷ ಮತ್ತು ಅಹಮದಾಬಾದ್ ವಿಮಾನ ದುರಂತ ಘಟನೆಗಳು ವಿಶ್ವದಾದ್ಯಂತ ಭಾರತೀಯ ವಿಮಾನಯಾನ ಕಾರ್ಯಾಚರಣೆಯಲ್ಲಿ ಬಹಳಷ್ಟು ಅಡಚದೆಗಳನ್ನು ತಂದೊಡ್ಡಿದೆ.