ವಿದೇಶಾಂಗ ವ್ಯವಹಾರಗಳ ಸಚಿವ ಪಬಿತ್ರಾ ಮಾರ್ಗರಿಟಾ ಸ್ವಾಗತಿಸಿದ ಚಿತ್ರಣ ( Image: X/@MEAIndia)
ದೆಹಲಿ: ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿದ್ದ ಸಂಘರ್ಷ ಜೂನ್ 24 ರಂದು ಕದನ ವಿರಾಮ ಘೋಷಿಸುವುದರ ಮೂಲಕ ಅಂತ್ಯವಾಗಿದೆ. ಆದರೆ ಇರಾನ್ ದೇಶದಲ್ಲಿ ಸಿಲುಕಿರುವ ನಾಗರಿಕರನ್ನು ಭಾರತ ಸರಕಾರ 'ಆಪರೇಷನ್ ಸಿಂಧೂ' ಹೆಸರಿನ ಕಾರ್ಯಾಚರಣೆಯಲ್ಲಿ ಸುರಕ್ಷಿತವಾಗಿ ದೇಶಕ್ಕೆ ಮರಳಿ ತರುತ್ತಿದೆ.
ಜೂನ್ 24 ರಂದು ವಿಶೇಷ ವಿಮಾನದಲ್ಲಿ 281 ಭಾರತೀಯ ನಾಗರಿಕರನ್ನು ಜೂನ್ 24 ರ ಬೆಳಗ್ಗಿನ ಜಾವ ಕರೆ ತಂದಿದೆ. ದೆಹಲಿಯಲ್ಲಿ ಬಂದಿಳಿದ ವಿಶೇಷ ವಿಮಾನ 3 ಶ್ರೀಲಂಕಾ ಪ್ರಜೆಗಳು, 2 ನೇಪಾಳ ಪ್ರಜೆಗಳನ್ನು ಒಳಗೊಂಡಿತ್ತು.
ಇದರೊಂದಿಗೆ, 'ಆಪರೇಷನ್ ಸಿಂಧೂ' ಕಾರ್ಯಾಚರಣೆ ಮೂಲಕ ಇಲ್ಲಿಯವರೆಗೆ ಒಟ್ಟು 2,576 ಭಾರತೀಯರನ್ನು ಯುದ್ಧ ದೇಶವಾದ ಇರಾನ್ ನಿಂದ ಕರೆ ತರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ಪಬಿತ್ರ ಮಾರ್ಗರಿಟಾ, ಭಾರತ ಸರಕಾರ ಅಗತ್ಯವಿರುವ ಜನರಿಗೆ ನೆರವು ನೀಡಲು ಬದ್ಧವಾಗಿದೆ ಮತ್ತು ನೆರೆಯ ದೇಶಗಳಾದ ಶ್ರೀಲಂಕಾ ಮತ್ತು ನೇಪಾಳ ದೇಶಗಳಿಗೆ ತಮ್ಮ ಸಹಾಯವನ್ನು ವಿಸ್ತರಿಸಿದೆ ಎಂದು ತಿಳಿಸಿದ್ದಾರೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಕಂಡಿದೆ. ನಿನ್ನೆ ಜೂನ್ 23 ರಂದು ರಾತ್ರಿ ಇರಾನ್ ಅಮೇರಿಕಾದ ಸೇನಾ ನೆಲೆಗಳಿದ್ದ ಕತಾರ್ ಮತ್ತು ಇರಾಕ್ ದೇಶಕ್ಕೆ ದಾಳಿ ನಡೆಸಿದ ನಂತರ ಎರಡು ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿದೆ.