ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ಸಿರಾಜುಲಿಯ ಡಾನ್ ಬೋಸ್ಕಾ ಶಾಲೆಯಲ್ಲಿ ಹಿಂದೂ ಮಗುವಿನ ಹಣೆಯಿಂದ 'ತಿಲಕ' ತೆಗೆದ ಪ್ರಕರಣ ಬೆಳಕಿಗೆ ಬಂದಿದೆ. ರಿನೀ ರೋಸ್ ಎನ್ನುವ ಶಿಕ್ಷಕಿ ಕೆಜಿ ವಿಭಾಗದಲ್ಲಿ ಕಲಿಯುತ್ತಿದ್ದ ಮಗುವಿನ ಹಣೆಯ ತಿಲಕ ತೆಗೆದಿದ್ದು, ಮಗು ಪೋಷಕರಿಗೆ ತಿಳಿಸಿದೆ.
ಈ ಬಗ್ಗೆ ಪೋಷಕರು ಶಾಲೆಯ ಪ್ರಿನ್ಸಿಪಾಲ್ ರವರಿಗೆ ವಿಷಯ ತಿಳಿಸಿದ್ದು, ಅಂತಹ ಘಟನೆ ಮತ್ತೊಮ್ಮೆ ಮರುಕಳಿಸುವುದಿಲ್ಲ ಎಂಬ ಭರವಸೆಯನ್ನು ನೀಡಲಾಗಿತ್ತು. ಆದರೆ, ಮರುದಿನ ಮತ್ತೊಮ್ಮೆ ಶಾಲಾ ಶಿಕ್ಷಕಿ ಬಾಲಕಿಯ ಹಣೆಯಿಂದ ತಿಲಕ ತೆಗೆಸಿದ್ದು, ಬಾಲಕಿ ಅಪಾರ ಭಾವನಾತ್ಮಕ ಯಾತನೆಯನ್ನು ಅನುಭವಿಸಿದ್ದಳು.
ಮರುಕಳಿಸಿದ ಸನ್ನಿವೇಶದಿಂದ ಬೇಸೆತ್ತ ಬಾಲಕಿಯ ಚಿಕಪ್ಪ ಅವಧ್ ಕಿಶೋರ್ ವರ್ಮಾ, ಧೇಕಿಯಾಜುಲು ಪೊಲೀಸ್ ಠಾಣೆಗೆ ದೂರು ನೀಡಿದ್ದು ‘ಈ ಕೃತ್ಯವು ನಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದಲ್ಲದೆ, ಭಾರತದ ಸಂವಿಧಾನ ಖಾತರಿ ಪಡಿಸಿದಂತೆ ನಮ್ಮ ಧರ್ಮವನ್ನು ಆಚರಿಸುವ ಮತ್ತು ವ್ಯಕ್ತಪಡಿಸುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಇದು ಧಾರ್ಮಿಕ ತಾರತಮ್ಯದ ನೇರ ಕೃತ್ಯ ಮತ್ತು ಹಿಂದೂ ನಂಬಿಕೆಗೆ ಉದ್ದೇಶಪೂರ್ವ ಅವಮಾನ' ಎಂದು ತನ್ನ ದೂರಿನಲ್ಲಿ ನಮೂದಿಸಿದ್ದಾರೆ ಎಂದು ಒಪಿಇಂಡಿಯಾ ಮಾದ್ಯಮದಲ್ಲಿ ಬಿತ್ತರವಾಗಿದೆ.
ಈ ಪ್ರಕರಣ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬರಸತ್ ಸದರ್ ನಲ್ಲಿರುವ ಜೋಗೇಂದ್ರನಾಥ ಬಾಲಿಕಾ ವಿದ್ಯಾಮಂದಿರದಲ್ಲಿ ವಿದ್ಯಾರ್ಥಿಯೊಬ್ಬರು ಧರಿಸಿದ್ದ ತುಳಸಿ ಮಾಲಾವನ್ನು ತೆಗೆಸಿದ್ದ ಪ್ರಕರಣಕ್ಕೆ ಹೋಲುವಂತಿದೆ.