29 July 2025 | Join group

'ನಮ್ಮ ಸರ್ಕಾರದಲ್ಲಿ ಹಣವಿಲ್ಲ, ಸಿದ್ದರಾಮಯ್ಯರವರಲ್ಲೂ ಹಣವಿಲ್ಲ' ಎಂದು ಹೇಳಿದ ಗೃಹ ಸಚಿವ ಡಾ. ಪರಮೇಶ್ವರ್ : ಕೂಡಲೇ ಯು-ಟರ್ನ್ ಹೊಡೆದ ಸಚಿವರು!

  • 25 Jun 2025 07:06:00 PM

ಬೆಂಗಳೂರು: ರಾಜ್ಯ ಗೃಹ ಸಚಿವ ಡಾ ಜಿ ಪರಮೇಶ್ವರ್ ರವರ ಇತ್ತೀಚಿನ ರಾಜ್ಯ ಸರಕಾರದ ಬೊಕ್ಕಸದ ಬಗ್ಗೆ ನೀಡಿದ ಹೇಳಿಕೆಯೊಂದು ರಾಜಕೀಯ ವಲಯದಲ್ಲಿ ಮತ್ತು ಸಾಮಾಜಿಕ ತಾಣದಲ್ಲಿ ಬಹಳ ಸದ್ದುಮಾಡುತ್ತಿದೆ.

 

ಉತ್ತರ ಕರ್ನಾಟಕದ ಬಾದಾಮಿಯಲ್ಲಿ ಭಾಷಣ ವೊಂದರಲ್ಲಿ ಗೃಹ ಸಚಿವರು ಅಗ್ನಿಶಾಮಕದ ಕೇಂದ್ರವನ್ನು ಉದ್ಘಾಟನೆ ಮಾಡಿದ ಬಳಿಕ ಮಾತನಾಡಿ “ಸರ್ಕಾರದ ಬಳಿ ದುಡ್ಡಿಲ್ಲ, ಸಿದ್ದರಾಮಯ್ಯ ಬಳಿಯೂ ದುಡ್ಡಿಲ್ಲ. ನಾವೆಲ್ಲ ನಿಮಗೆ ಕೊಟ್ಟಿದ್ದೇವೆ ನಮ್ಮಲ್ಲಿ ದುಡ್ಡಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸರಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

 

“ನಾವು ನಿಮಗೆ ಅಕ್ಕಿ, ಬೇಳೆ, ಎಣ್ಣೆ ಕೊಟ್ಟಿದ್ದೇವೆ ಆದ್ದರಿಂದ ನಮ್ಮಲ್ಲಿ ಹಣವಿಲ್ಲ” ಎಂದು ಹೇಳಿ “ಬಾದಾಮಿ ನಗರವನ್ನು ಅಭಿವೃದ್ಧಿಪಡಿಸುವ ಒಂದು ಸಾವಿರ ಕೋಟಿ ಪ್ರೊಜೆಕ್ಟ್ ಮಾಡಿ ಕೇಂದ್ರಕ್ಕೆ ಕಳುಹಿಸಿ ಎಂದು ಅಲ್ಲಿಯ ಶಾಸಕ ಮತ್ತು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. 

 

ಈಗಾಗಲೇ ಹಲವಾರು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಗೃಹ ಸಚಿವರ ಹೇಳಿಕೆ ಬೆಂಕಿಗೆ ತುಪ್ಪದ ಎರಗಿದಂತಾಗಿದೆ. ಪರಮೇಶ್ವರ್ ಗೃಹ ಸಚಿವ ಸ್ಥಾನವನ್ನು ಒಲ್ಲದ ಮನಸಿನಲ್ಲಿ ಒಪ್ಪಿಕೊಂಡಿರುವುದು ಕೂಡ ಈ ಅಸಮಾಧಾನಕ್ಕೆ ಕಾರಣವಾಗಿರಬಹುದು ಎಂದು ತಿಳಿದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ಆದರೆ, ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಸಭಾ ಕಾರ್ಯಕ್ರಮದಲ್ಲಿ ಗೃಹ ಸಚಿವರು ಸರಕಾರದಲ್ಲಿ ದುಡ್ಡಿಲ್ಲ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ. "ಯಾರು ಹೇಳಿದ್ದು ಸರಕಾರದಲ್ಲಿ ದುಡ್ಡಿಲ್ಲ ಎಂದು? ನಾನು ಆ ರೀತಿ ಹೇಳಿಲ್ಲ" ಎಂದು ತನ್ನ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡರು. "ಸರಕಾರದಲ್ಲಿ ಎಲ್ಲಾ ಯೋಜನೆಗಳಿಗೆ ಬೇಕಾದ ಹಣದವಿದೆ ಆದರೆ ನಿಧಿ ವಿತರಣೆ ಪ್ರಕ್ರಿಯಲ್ಲಿ ಸ್ವಲ್ಪ ತಡವಾಗುತ್ತಿದೆ ಹೊರತು ಫಂಡ್ ನಮ್ಮ ಸರಕಾರದಲ್ಲಿದೆ" ಎಂದು ಹೇಳಿಕೆ ನೀಡಿ ಯು-ಟರ್ನ್ ಹೊಡೆದರು.