2019 ರಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಸೆರೆಹಿಡಿದಿದ್ದ ಪಾಕಿಸ್ತಾನದ ಸೇನೆ ಮೇಜರ್ ಎನ್‌ಕೌಂಟರ್ ನಲ್ಲಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಪಾಕ್ ಸೇನೆಯ ಮೇಜರ್ ಮೊಯಿಜ್ ಅಬ್ಬಾಸ್ ಶಾ (37), ದಕ್ಷಿಣ ವಾಜಿರಿಸ್ತಾನ್ ನ ಸರ್ಗೋಧಾ ಮತ್ತು ಕುರ್ರಮ್ ಪ್ರದೇಶಗಳಲ್ಲಿ ಪಾಕಿಸ್ತಾನಿ ಸೇನೆಯ ಮೇಲೆ ನಡೆದ ದಾಳಿಯಲ್ಲಿ ಹ*ತ್ಯೆಯಾಗಿದ್ದಾನೆ.
ಪಾಕಿಸ್ತಾನ ಸೇನೆಯ ಗಣ್ಯ ವಿಶೇಷ ಸೇವಾ ಗುಂಪಿನ ಸದಸ್ಯನಾಗಿದ್ದ ಅಬ್ಬಾಸ್, ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಜೊತೆಗಿನ ಎನ್ಕೌಂಟರ್‌ನಲ್ಲಿ ಹ*ತ್ಯೆಯಾಗಿದ್ದು, ಗುಂಡಿನ ಚಕಮಕಿಯಲ್ಲಿ ಮತ್ತೊಬ್ಬ ಸೈನಿಕ ಲ್ಯಾನ್ಸ್ ನಾಯಕ್ ಜಿಬ್ರಾನುಲ್ಲಾ ಕೂಡ ಹ*ತ್ಯೆಯಾಗಿರುವ ಬಗ್ಗೆ ಪಾಕಿಸ್ತಾನ ಸೇನೆ ಮಾಹಿತಿ ನೀಡಿದೆ.
2019ರ ಪಾಕಿಸ್ತಾನದ ದಾಳಿಯ ಸಂದರ್ಭದಲ್ಲಿ ಮಿಗ್-21 ಬೈಸನ್ ಜೆಟ್ ಪೈಲಟ್ ಆಗಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ರವರು, ಪಾಕಿಸ್ತಾನದ ವಿರುದ್ದದ ಪ್ರತಿಕಾರದ ದಾಳಿಯಲ್ಲಿ ಪಾಕಿಸ್ತಾನದ ವಾಯುನೆಲೆಗೆ ಪ್ರವೇಶಿಸಿದ್ದರು. ಆ ಸಂದರ್ಭದಲ್ಲಿ ಪಾಕಿಸ್ತಾನದ ವಾಯುಪಡೆ ಇವರ ಫೈಟರ್ ಜೆಟ್ ನ್ನು ಹೊಡೆದುರುಳಿಸಲಾಗಿತ್ತು.
ದುರದೃಷ್ಟವಶಾತ್, ಅಭಿನಂದನ್ ನ ಫೈಟರ್ ಜೆಟ್ ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿ ಬಿದ್ದ ಕಾರಣ ಅವರನ್ನು ಪಾಕಿಸ್ತಾನದ ಸೇನೆ ವಶಕ್ಕೆ ಪಡೆದುಕೊಂಡಿತ್ತು. ಇವರನ್ನು ಸೆರೆ ಹಿಡಿಯುವಲ್ಲಿ ಅಬ್ಬಾಸ್ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾನೆ ಎಂದು ವರದಿಯಾಗಿತ್ತು. 58 ಗಂಟೆಗಳ ನಂತರ ವಿಂಗ್ ಕಮಾಂಡರ್ ಅಭಿನಂದನ್ ರವರನ್ನು ಪಾಕಿಸ್ತಾನ ಭಾರತಕ್ಕೆ ತಂದು ಒಪ್ಪಿಸಿತ್ತು.