ಪುತ್ತೂರು: ತನ್ನ ಸಹಪಾಠಿಯನ್ನು ಬಲಾತ್ಕಾರ ಮಾಡಿ ಗರ್ಭವತಿ ಮಾಡಿದ ಪ್ರಕರಣವೊಂದು ಪುತ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮದುವೆಯ ನೆಪವೊಡ್ಡಿ ಇಬ್ಬರು ದೈಹಿಕ ಸಂಪರ್ಕವನ್ನು ಬೆಳೆಸಿಕೊಂಡು ಕೊನೆಗೆ ಆರೋಪಿ ತನ್ನನ್ನು ದೂರ ಮಾಡಿದ್ದಾನೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ.
ವಿದ್ಯಾರ್ಥಿ ಕೃಷ್ಣ ರಾವ್ (21) ತನ್ನ ಸಹಪಾಠಿಯನ್ನು ಮನೆಗೆ ಕರೆಸಿಕೊಂಡು ಮದುವೆ ಆಗುವ ಆಮಿಷವೊಡ್ಡಿ ದೈಹಿಕ ಸಂಪರ್ಕ ನಡೆಸಿದ್ದಾನೆ ಎಂದು ಆರೋಪದಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿ ವಿದ್ಯಾರ್ಥಿ ಕೃಷ್ಣ ರಾವ್ ಮತ್ತು ಸಂತ್ರಸ್ತೆ ವಿದ್ಯಾರ್ಥಿನಿ(21) ಮಂಗಳೂರಿನ ಪ್ರತಿಷ್ಠಿತ ಕಾಲೇಜ್ ಒಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ಸ್ನೇಹ ಸಂಬಂಧಕ್ಕೆ ತಿರುಗಿ ನಂತರ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದರು.
ಸಂತ್ರಸ್ತೆ ತಾನು ಗರ್ಭಿಣಿ ಎಂದು ತಿಳಿದ ತಕ್ಷಣ ತನ್ನ ಮನೆಯವರಿಗೆ ತಿಳಿಸಿದ್ದಾಳೆ. ನಂತರ ಎರಡು ಕುಟುಂಬದವರು ಮಾತನಾಡಿ, ಮದುವೆಗೆ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ತದನಂತರ ನಿಧಾನವಾಗಿ ಕೃಷ್ಣ ರಾವ್ ಆಕೆಯನ್ನು ದೂರ ಮಾಡಲು ಪ್ರಾರಂಭಿಸಿದ ಎಂದು ಕೇಸಿನಲ್ಲಿ ದಾಖಲಿಸಲಾಗಿದೆ.
ಇದೀಗ 9 ತಿಂಗಳ ತುಂಬು ಗರ್ಭವತಿಯಾಗಿದ್ದ ಸಂತ್ರಸ್ತೆಗೆ ಅತಿಯಾಗಿ ನೋವು ಬಂದ ಕಾರಣ ಆಸ್ಪತ್ರೆಗೆ ದಾಖಲಿಸಿದ್ದು, ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಅತ್ಯಾಚಾರ ಪ್ರಕರಣ ಪುತ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ.