ಮಂಗಳೂರು: ಜೂನ್ 27 ರಂದು ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66 ರ ಪಾವಂಜೆಯಲ್ಲಿ ನಡೆದ ಭೀಕರ ಅಪಘಾತಕ್ಕೆ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. ಮೃತ ಮಹಿಳೆ ಬಂಗ್ರಕುಳೂರು ನಿವಾಸಿ ಶ್ರುತಿ ಆಚಾರ್ಯ(27) ಎಂದು ಗುರುತಿಸಲಾಗಿದ್ದು, ಅವರ ತಂದೆ ಗೋಪಾಲ ಆಚಾರ್ಯ(53) ಮತ್ತು ಪಕ್ಕದಲ್ಲಿದ್ದ ಕೈರುನ್ನಿಸಾ (52) ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದಾರೆ.
ಚೆನ್ನೈ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಶ್ರುತಿ, ಕೆಲ ದಿನಗಳ ಹಿಂದೆ ಮೃತಪಟ್ಟಿದ್ದ ತನ್ನ ಸಹೋದರನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಊರಿಗೆ ಬಂದಿದ್ದಳು ಎನ್ನಲಾಗಿದೆ. ತಂದೆ ಮತ್ತು ಮಗಳು ಕಿನ್ನಿಗೋಳಿಯಲ್ಲಿರುವ ಬ್ಯಾಂಕ್ ಗೆ ತೆರಳಿ ಅಲ್ಲಿಂದ ಮರಳಿ ತನ್ನ ಸ್ಕೂಟರ್ ನಲ್ಲಿ ಬರುವಾಗ ರಸ್ತೆಯಲ್ಲಿ ನಿಲ್ಲಿಸಿದ್ದ ಇವರ ಬೈಕ್ ಗೆ ರಭಸದಿಂದ ಬಂದ ಕಾರು ಅಪ್ಪಳಿಸಿದೆ.
ಜೋರಾಗಿ ಮಳೆ ಸುರಿದ ಕಾರಣ ಶ್ರುತಿ ತನ್ನ ಬೈಕನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ರೈನ್ ಕೋಟ್ ಧರಿಸುವ ಸಂದಭದಲ್ಲಿ ಕಾರು ಬಂದು ಅಪ್ಪಳಿಸಿದೆ. ರಭಸ ಎಷ್ಟಿತ್ತೆಂದರೆ ಶ್ರುತಿಯ ಬೈಕ್ ಕೆಲವು ಮೀಟರ್ ಗಳಷ್ಟು ದೂರದಲ್ಲಿ ಬಿದ್ದಿತ್ತು. ಆಸ್ಪತ್ರೆಗೆ ಸಾಗಿಸಲಾದರೂ, ಆಕೆ ಕೊನೆಯುಸಿರೆಳೆದಿದ್ದಾರೆ.