ಶನಿವಾರ ನಡೆದ ಕುರುಬ ಸಮುದಾಯದ ಬಿಜೆಪಿ ನಾಯಕರ ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. ಸಭೆಯಲ್ಲಿ ಸೇರಿದ್ದ ನಾಯಕರು ಈಶ್ವರಪ್ಪ ಅವರನ್ನು ಬಿಜೆಪಿಗೆ ಬರಬೇಕೆಂದು ಒತ್ತಾಯ ಇಟ್ಟಾಗ ಪ್ರತಿಕ್ರಿಯಿಸಿದ ಅವರು 'ನನ್ನ ಜೀವ ಇರೋದು ಬಿಜೆಪಿಯಲ್ಲಿ, ಕೆಲವು ಹಿರಿಯರ ಜೊತೆ ಮಾತನಾಡಿ, ಕುಳಿತು ಚರ್ಚೆ ಮಾಡಿ ಆಮೇಲೆ ನೋಡೋಣ' ಎಂದು ಹೇಳಿದ್ದಾರೆ.
'ನನಗೆ ಮತ್ತು ನನ್ನ ಮಗನಿಗೆ ಬೇರೆ ಪಕ್ಷಗಳಿಂದ ಆಫರ್ ಬಂದಿತ್ತು. ಸಿದ್ದರಾಮಯ್ಯ ಸರಕಾರದ ಸಚಿವ ಸಂಪುಟದ ಸಚಿವರು ಕೂಡ ಕರೆದಿದ್ದರು. ಉತ್ತಮ ಸ್ಥಾನಮಾನ ಕೊಡುವ ಭರವಸೆ ನೀಡಿದ್ದರು. ಅದು ಮಾತ್ರವಲ್ಲದೆ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೂಡ ಕರೆದಿದ್ರು. ಆದರೆ ನಾನು ಹಿಂದುತ್ವ, ಸತ್ರು ಹಿಂದುತ್ವ' ಎಂದು ಹೇಳುವುದರ ಮೂಲಕ ತನಗೆ ಬಂದ ಬೇರೆ ಪಾರ್ಟಿಗಳ ಆಫರ್ ಗಳನ್ನೂ ತಳ್ಳಿ ಹಾಕಿದ್ದೇನೆ ಎಂದು ನುಡಿದರು.
'ಯಡಿಯೂರಪ್ಪ, ಅನಂತ್ ಕುಮಾರ್ ಜೊತೆ ಸೇರಿ ನಾವು ರಾಜ್ಯದಲ್ಲಿ ಪಕ್ಷ ಕಟ್ಟಿದ್ದೇವೆ. ಅದಕ್ಕೆ ಮುಂಚೆ ಹಲವಾರು ಹಿರಿಯರು ರಕ್ತ ಸುರಿಸಿ ಪಕ್ಷಕ್ಕಾಗಿ ದುಡಿದಿದ್ದಾರೆ. ಗ್ರಾಮ ಪಂಚಾಯತ್, ಕಾರ್ಪೊರೇಷನ್ ಎಲೆಕ್ಷನ್ ಮಾಡಲು ಜನ ಇಲ್ಲದ ಸಂದರ್ಭದಲ್ಲಿ ನಾವು ಪಕ್ಷವನ್ನು ಕಟ್ಟಿದ್ದೇವೆ' ಎಂದು ಪಕ್ಷಕ್ಕೆ ದುಡಿದ ಬಗ್ಗೆ ತಿಳಿಸಿದರು.
'ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದು ಮುಗಿದ ಅದ್ಯಾಯ ಅದರ ಬಗ್ಗೆ ನಾನು ಇನ್ನು ಏನು ಮಾತನಾಡುವುದಿಲ್ಲ. ಪಕ್ಷಕ್ಕೆ ನನ್ನನ್ನು ಯಾವಾಗ ಕರಿಬೇಕು ಅಥವಾ ಕರಿಬಾರದು ಈ ಎಲ್ಲ ವಿಚಾರವನ್ನು ಹಿರಿಯರು ಚರ್ಚೆ ಮಾಡುತ್ತಾರೆ. ನನನ್ನು ಪಕ್ಷಕ್ಕೆ ಕರೆದುಕೊಳ್ಳುವಲ್ಲಿ ಬಿಜೆಪಿ ಯಾಕೆ ಎಚ್ಚೆತ್ತುಕೊಂಡಿಲ್ಲ ಅಂತ ನಾನು ಹೇಳಬಲ್ಲೆ' ಎಂದು ಹೇಳುತ್ತಾ ಪಕ್ಷಕ್ಕೆ ಮರು ಸೇರ್ಪಡೆ ಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.