24 December 2025 | Join group

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಸಂದೇಶ: ಬಿಗಿ ಭದ್ರತೆ

  • 30 Jun 2025 09:52:49 AM

ಮಂಗಳೂರು: ಬಜ್ಪೆಯಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕರಿಗೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸುವ ಬಗ್ಗೆ ರವಿವಾರ ಬೆಳಗ್ಗೆ ಇಮೇಲ್ ಮೂಲಕ ಸಂದೇಶ ಬಂದಿದೆ ಎನ್ನಲಾಗಿದೆ. ಒಟ್ಟಿಗೆ ರಾಜ್ಯದಲ್ಲಿ ಮಂಗಳೂರು ಸೇರಿದಂತೆ 4 ವಿಮಾನ ನಿಲ್ದಾಣಗಳಿಗೆ ಈ ರೀತಿಯ ಇ-ಮೇಲ್ ಸಂದೇಶ ಬಂದಿದೆ.

 

ಮಂಗಳೂರು, ಬೆಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳಿಗೆ ಬೆದರಿಕೆ ಸಂದೇಶ ಬಂದಿರುವ ಸಲುವಾಗಿ, ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತು ಮಾಡಲಾಗಿದೆ. ಪ್ರತಿಯೊಬ್ಬ ಪ್ರಯಾಣಿಕರನ್ನು ಮತ್ತು ವಿಮಾನ ನಿಲ್ದಾಣ ಸುತ್ತಮುತ್ತ ಸುಳಿದಾಡುವ ಸಾರ್ವಜನಿಕರನ್ನು ಕೂಡ ತಪಾಸಣೆ ಮಾಡಲಾಗುತ್ತದೆ.

 

ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆ ಸಂಪೂರ್ಣ ನಿಗಾ ವಹಿಸಿದ್ದು, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ, ಗುಪ್ತಚರ ಇಲಾಖೆ, ಪೊಲೀಸ್ ಸಿಬ್ಬಂದಿ ಹಾಗೂ ಇನ್ನಿತರ ಸಂಬಂಧಪಟ್ಟ ಇಲಾಖೆಗಳು ಸುರಕ್ಷೆ ಮತ್ತು ಭದ್ರತೆಯ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.