ಬಂಟ್ವಾಳ: ಕರ್ನಾಟಕ ಬ್ಯಾಂಕ್ ನಲ್ಲಿ ಕೆಲವು ಖರ್ಚುಗಳ ಬಗ್ಗೆ ಲೆಕ್ಕಪರಿಶೋಧಕರು ಎಚ್ಚರಿಕೆಯ ಸೂಚನೆ ನೀಡಿದ ಕೂಡಲೇ ಬ್ಯಾಂಕ್ ನ ನಿರ್ದೇಶಕರ ಮಂಡಳಿಯು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀಕ್ರಷ್ಣನ್ ಹರಿ ಹರ ಶರ್ಮ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಅವರ ರಾಜೀನಾಮೆಯನ್ನು ಅಂಗೀಕರಿಸಿದೆ.
100 ವರ್ಷ ಹಳೆಯದಾದ ಮತ್ತು 957 ಶಾಖೆಗಳನ್ನು ಹೊಂದಿರುವ ಮಂಗಳೂರು ಮೂಲದ ಕರ್ನಾಟಕ ಬ್ಯಾಂಕ್ ಮಾರ್ಚ್ 31, 2025 ರವರೆಗಿನ ತ್ರೈಮಾಸಿಕ ವೇಳೆಗೆ, ಒಟ್ಟು 1.04 ಲಕ್ಷ ಕೋಟಿ ರೂ. ಠೇವಣಿಯನ್ನು ವರದಿ ಮಾಡಿತ್ತು. ಬ್ಯಾಂಕಿಗೆ ನಿರ್ದಿಷ್ಟ ಪ್ರವರ್ತಕರು ಇಲ್ಲದಿದ್ದರೂ, ಸಂಪೂರ್ಣ ಪಾಲನ್ನು ಸಾರ್ವಜನಿಕರು, ಪಿಎಫ್ಐ ಮತ್ತು ಮ್ಯೂಚುಯಲ್ ಫಂಡ್ ಗಳಿಂದ ಹೊಂದಿದೆ.
ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ತಾನು ಮುಂಬೈಗೆ ಸ್ಥಳಾಂತರಗೊಳ್ಳುವ ನಿರ್ಧಾರ ಕೈಗೊಂಡಿದ್ದು, ಮಂಗಳೂರಿಗೆ ಸ್ಥಳಾಂತರಗೊಳ್ಳಲು ಅಸಮರ್ಥತೆ ಮತ್ತು ಇನ್ನಿತರ ವೈಯಕ್ತಿಕ ಕಾರಣಗಳನ್ನು ನೀಡುವುದರ ಮೂಲಕ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಜುಲೈ 31 ರಿಂದ ಅವರ ರಾಜೀನಾಮೆ ಜಾರಿಗೆ ಬರಲಿದೆ ಎಂದು ವರದಿಯಾಗಿದೆ.
ಲೆಕ್ಕಪರಿಶೋಧಕರ ಸಂಶೋಧನೆಗಳು ಗುರುತುಪಡಿಸಿದ ಆಡಳಿತದ ಲೋಪಗಳು ಮತ್ತು ಆಂತರಿಕ ಘರ್ಷಣೆಯು ಈ ಇಬ್ಬರ ರಾಜೀನಾಮೆಗೆ ಮೂಲ ಕಾರಣ ಎನ್ನಲಾಗಿದೆ. ಒಟ್ಟು ಖರ್ಚು ರೂ 1.53 ಕೋಟಿ ರೂ. ಗಳನ್ನೂ ಒಳಗೊಂಡಿದ್ದು ಅದರಲ್ಲಿ ಸಲಹೆಗಾರರಿಗೆ 1.16 ಕೋಟಿ ರೂ. ಗಳು ಮತ್ತು ಆದಾಯ, ಬಂಡವಾಳ ವಸ್ತುಗಳಿಗೆ 37 ಲಕ್ಷ ರೂ. ಗಳು ಸೇರಿವೆ ಎಂದು ತಿಳಿದುಬಂದಿದೆ. ಈ ವಿಚಾರ ಸುಮಾರು ಆರು ವಾರಗಳ ನಂತರ ಬೆಳಕಿಗೆ ಬಂದವು.
ಈ ವಿಚಾರ ಬೆಳಕಿಗೆ ಬಂದ ಕೂಡಲೇ ಸೋಮವಾರ ಬೆಳಗಿನ ವಹಿವಾಟಿನ ವೇಳೆಗೆ ಬಿಎಸ್‌ಇಯಲ್ಲಿ ಬ್ಯಾಂಕಿನ ಷೇರುಗಳು ಶೇ. 5.51 ರಷ್ಟು ಕುಸಿದು ₹ 196.25 ಕ್ಕೆ ತಲುಪಿತ್ತು. ಕರ್ನಾಟಕ ಬ್ಯಾಂಕ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ವರ್ಷ ಉತ್ತಮ ರೀತಿಯ ಬೆಳವಣಿಗೆಯನ್ನು ಕಾಣುತ್ತಿದೆ.
ಇದೀಗ ಬ್ಯಾಂಕ್ ನ ನಿರ್ದೇಶಕರ ಮಂಡಳಿ ಹೊಸ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹಾಗೂ ಹೊಸ ಕಾರ್ಯನಿರ್ವಾಹಕ ನಿರ್ದೇಶಕರ ಹುದ್ದೆಗೆ ಸೂಕ್ತ ಅಭ್ಯರ್ಥಿಗಳನ್ನು ಹುಡುಕಲು ಬ್ಯಾಂಕ್ ಶೋಧ ಸಮಿತಿಯನ್ನು ರಚಿಸಿದೆ. ಈಗಾಗಲೇ ಬ್ಯಾಂಕ್ ಮುಖ್ಯ ಕಾರ್ಯಾಚರಣಾ ಅಧಿಕಾರಿ(ಸಿಇಒ) ಸ್ಥಾನಕ್ಕೆ ಅನುಭವಿ ಬ್ಯಾಂಕರ್ ಒಬ್ಬರನ್ನು ಆರಿಸಿದ್ದು, ಜೂಲೈ 02, 2025 ರಂದು ಅಧಿಕಾರ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.