ಮಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಗಾದೆಯಂತೆ, ಮಂಗಳೂರಿನಲ್ಲಿರುವ ಒಂದು ಬ್ಯಾಂಕಿನಲ್ಲಿ ಅದೇ ಬ್ಯಾಂಕಿನ ವ್ಯವಸ್ಥಾಪಕರು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡ ಘಟನೆ ವರದಿಯಾಗಿದೆ.
ಶಕ್ತಿನಗರ ವ್ಯವಸಾಯ ಸೇವಾ ಕೇಂದ್ರದ ವ್ಯವಸ್ಥಾಪಕ ಪ್ರೀತೇಶ್ ಸಾಲ ಪಡೆಯಲು ಬ್ಯಾಂಕಿನಲ್ಲಿ ಇಟ್ಟಿದ್ದ ಗ್ರಾಹಕರ ಚಿನ್ನದೊಂದಿಗೆ ಪರಾರಿಯಾಗಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಚಿನ್ನದ ಅಂದಾಜು ಮೌಲ್ಯ ರೂ. 6.5 ಕೋಟಿಯಾಗಿದೆ.
ಈ ಘಟನೆ ಪದುವಾದಲ್ಲಿರುವ ಶಕ್ತಿನಗರ ಬ್ಯಾಂಕಿನಲ್ಲಿ ಬೆಳಕಿಗೆ ಬಂದಿದೆ. ಗ್ರಾಹಕರು ಅಡವಿಟ್ಟ ಚಿನ್ನವನ್ನು ಬೇರೆ ಬ್ಯಾಂಕಿನಲ್ಲಿ ಠೇವಣಿ ಇರಿಸಿ ರೂ. 3.5 ಕೋಟಿ ಸಾಲ ಪಡೆದಿದ್ದ.
ಪ್ರೀತೇಶ್ ಗೆ ಸಹಾಯ ಮಾಡಿದ ಮತ್ತೊಬ್ಬ ವ್ಯಕ್ತಿ ಶೇಖ್ ಮೊಹಮ್ಮದ್ ಮತ್ತು ಇನ್ನೂ ಇಬ್ಬರು ವ್ಯಕ್ತಿಗಳು ಪರಾರಿಯಾಗಿದ್ದಾರೆ.
ಮೂಲಗಳ ಪ್ರಕಾರ, ಆರೋಪಿ ಲಾಕರ್ ನಲ್ಲಿ ಜಮವಾಗಿದ್ದ ಬಂಗಾರವನ್ನು ಬೇರೆ ಬ್ಯಾಂಕ್ ಗೆ ಒತ್ತೆ ಇಟ್ಟು ಲೋನ್ ಪಡೆದಿದ್ದು ಮಾತ್ರವಲ್ಲದೆ, ಹಣವನ್ನು ಪಡೆದ ಬಳಿಕ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದ.
ಗ್ರಾಹಕರನ್ನು ವಂಚಿಸುವ ಸಲುವಾಗಿ ಪ್ರೀತೇಶ್, ಲಾಕರ್ ನಲ್ಲಿದ್ದ ಬಂಗಾರದ ರೀತಿಯ ಅದೇ ವಿನ್ಯಾಸದ ನಕಲಿ ಬಂಗಾರಗಳನ್ನು ತಯಾರಿ ಮಾಡಿ ಲಾಕರ್ ನಲ್ಲಿಟ್ಟಿದ್ದ ಎನ್ನಲಾಗಿದೆ.
ಇದೀಗ ನಕಲಿ ರೋಲ್ಡ್ ಗೋಲ್ಡ್ ನ್ನು ಶೇಖ್ ಮೊಹಮ್ಮದ್ ರಿಂದ ಪೊಲೀಸರು ವಶಪಡಿಸಿಕೊಂಡಿದ್ದು, ಈತನನ್ನು ಮತ್ತು ಮುಖ್ಯ ಆರೋಪಿ ಪ್ರೀತೇಶ್ ನನ್ನು ಬಂಧಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದಂತೆ, ಪ್ರೀತೇಶ್ ಬೆಂಗಳೂರಿಗೆ ಹೋಗಿ ಅಲ್ಲಿಂದ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದ. ಪೊಲೀಸರ ಲುಕ್ ಔಟ್ ನೋಟೀಸ್ ಜಾರಿ ಆದ ಮೇಲೆ ಆರೋಪಿ ಮರಳಿ ಭಾರತಕ್ಕೆ ಬಂದಿದ್ದ ಎನ್ನಲಾಗಿದೆ.
ತಪ್ಪಿಸಿಕೊಂಡಿರುವ ಇಬ್ಬರು ಆರೋಪಿಗಳನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದು, ಪ್ರೀತೇಶ್ ಮತ್ತು ಶೇಕ್ ಮೊಹಮ್ಮದ್ ರವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.