29 July 2025 | Join group

ದಕ್ಷಿಣ ಕನ್ನಡದಲ್ಲಿ ಕೆಂಪು ಕಲ್ಲು ಮತ್ತು ಮರಳು ಸ್ಥಗಿತದಿಂದ ದಿನಗೂಲಿ ಕಾರ್ಮಿಕರ ಹೊಟ್ಟೆಗೆ ಬರೆ!

  • 02 Jul 2025 10:48:32 AM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳಿನ ಪೂರೈಕೆ ಸ್ಥಗಿತಗೊಂಡ ಪರಿಣಾಮ, ಅನೇಕ ದಿನಗೂಲಿ ಕಾರ್ಮಿಕರು ಬದುಕಿಗಾಗಿ ಹೋರಾಡುವ ಸ್ಥಿತಿಗೆ ದುಪ್ಪಟ್ಟಾಗಿದೆ. ಹೊಸ ಮನೆ ಕಟ್ಟುವ ಕನಸು ಕಂಡವರು ಈಗ ಪರದಾಡುವ ಸ್ಥಿತಿಯಲ್ಲಿ ಸಿಲುಕಿದ್ದಾರೆ. ಹಲವಾರು ಮನೆಗಳು ಮತ್ತು ಕಟ್ಟಡಗಳ ನಿರ್ಮಾಣ ಅರ್ಧದಲ್ಲೇ ನಿಂತಿವೆ.

 

ಮನೆ ಅಥವಾ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಮರಳು ಮತ್ತು ಕೆಂಪು ಕಲ್ಲು ಲಭ್ಯವಿಲ್ಲದ ಕಾರಣ, ಮೇಸ್ತ್ರಿ, ಎಲೆಕ್ಟ್ರಿಷಿಯನ್, ಪ್ಲಂಬಿಂಗ್ ಸೇರಿದಂತೆ ಹಲವಾರು ಕ್ಷೇತ್ರಗಳ ಕಾರ್ಮಿಕರು ಕೆಲಸವಿಲ್ಲದೆ ಕುಳಿತಿದ್ದಾರೆ.

 

ಈ ಕುರಿತು ಸೋಮವಾರ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಷತ್ (ಕೆಡಿಪಿ) ಸಭೆಯಲ್ಲಿ ಶಾಸಕರು ಮತ್ತು ಅಧಿಕಾರಿಗಳ ಉಪಸ್ಥಿತಿಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಕೇರಳದಿಂದ ಆಗಮಿಸುವ ಕೆಂಪು ಕಲ್ಲಿನ ಬೆಲೆ ತುಂಬಾ ಅಧಿಕವಿದ್ದು, ಸಾಮಾನ್ಯ ಜನರಿಗೆ ಖರೀದಿ ಮಾಡುವ ಸಾಮರ್ಥ್ಯವಿಲ್ಲ ಎಂಬುದೂ ಸಭೆಯಲ್ಲಿ ಪ್ರಸ್ತಾಪವಾಯಿತು.

 

ಅನಧಿಕೃತ ಕೆಂಪು ಕಲ್ಲು ಕೋರೆ ನಡೆಸುವವರನ್ನು ತಡೆಯಬೇಕು, ಆದರೆ ಅಧಿಕೃತವಾಗಿ ಕಲ್ಲು ತಗೆದುಕೊಳ್ಳುವವರಿಗೆ ಅನುಮತಿ ನೀಡಬೇಕು ಎಂಬ ಬೇಡಿಕೆಯನ್ನು ಮೂಡಬಿದ್ರೆಯ ಶಾಸಕ ಉಮಾನಾಥ ಕೋಟ್ಯಾನ್ ಸಚಿವರಿಗೆ ಒತ್ತಾಯಿಸಿದರು.

 

ಈ ಎಲ್ಲಾ ವಿಚಾರಗಳನ್ನು ಬೆಂಗಳೂರಿನಲ್ಲಿ ಪ್ರಸ್ತಾಪಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಮರಳು ಮತ್ತು ಕೆಂಪು ಕಲ್ಲಿನ ಪೂರೈಕೆಗೆ ಅಂಟಿಕೊಂಡಿರುವ ಅಡಚಣೆ ಶೀಘ್ರದಲ್ಲಿ ನಿವಾರಣೆಯಾಗಬೇಕೆಂದು ಕಾರ್ಮಿಕರು ಹಾಗೂ ಮನೆ ಕಟ್ಟುವವರಿಗೆ ಅಪೇಕ್ಷೆಯಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಬರಲಿದೆ ಅತೀ ದೊಡ್ಡ ಪೆಟ್ರೋಲಿಯಂ ಸಂಗ್ರಹಣಾ ಕೇಂದ್ರ: ಮೋದಿ ಸರಕಾರದ ಘೋಷಣೆ