ಮಂಗಳೂರು: ಸರಕಾರಿ ಆಸ್ಪತ್ರೆಗಳಲ್ಲಿ ಔಷದ ಸಿಗದೇ ಬಡ ರೋಗಿಗಳು ಪರದಾಟ ನಡೆಸುವ ಬಗ್ಗೆ ರಾಜ್ಯದ ಹಲವಾರು ಆಸ್ಪತ್ರೆಗಳಿಂದ ದಿನೇ ವರದಿಯಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳು ಸಿಗದೇನೇ ಬಡ ರೋಗಿಗಳು ಪರದಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಮೆಡಿಸಿನ್ ಬೇಕಾದರೆ ಹೊರಗೆ ಹೋಗಿ ತರಬೇಕಾದ ಪರಿಸ್ಥಿತಿ ಜಿಲ್ಲಾ ಸರಕಾರಿ ಆಸ್ಪತ್ರೆಗಳಿಗೆ ಬಂದೊದಗಿದೆ. ಹೊರಗಡೆಯಿಂದ ಔಷಧ ತರುವಂತೆ ಚೀಟಿಯನ್ನು ಸಿಬ್ಬಂದಿಗಳು ಕೊಡುತ್ತಾರೆ ಎಂದು ರೋಗಿಗಳು ಆರೋಪ ಹೊರಿಸಿದ್ದಾರೆ.
ಇತ್ತೀಚಿಗೆ ಕಲಬುರುಗಿ ಜಿಲ್ಲೆಯ ಕಮಲಾಪುರ ಜಿಲ್ಲಾ ಆಸ್ಪತ್ರೆಯ ಪ್ರಕರಣವನ್ನು ಎತ್ತಿಕೊಂಡು ಇದೀಗ ಬಿಜೆಪಿ ರಾಜ್ಯ ಸಚಿವ ಪ್ರಿಯಾಂಕಾ ಖರ್ಗೆ ಮೇಲೆ ಎರಗಿದ್ದಾರೆ. ನಿಮ್ಮ ಜಿಲ್ಲೆಯಲ್ಲೇ ರೋಗಿಗಳ ಈ ರೀತಿಯ ಪರಿಸ್ಥಿತಿಯಾದರೆ ರಾಜ್ಯದ ಬೇರೆ ಕಡೆ ಯಾವ ರೀತಿ ಇರಬಹುದು ಎಂದು ಹೀಯಾಳಿಸಿದ್ದಾರೆ.
ಈ ವಿಚಾರವನ್ನು ಪ್ರಸ್ತಾಪಿಸಿ ಬಿಜೆಪಿ 'ಮೋದಿ ಸರಕಾರದ ಜನ ಔಷಧಿ ಕೇಂದ್ರಗಳು ಬಡವರ ಪಾಲಿಗೆ ಸಂಜೀವಿನಿ ಕೇಂದ್ರಗಳಾಗಿದ್ದವು. ಆದರೆ ಸಿದ್ದರಾಮಯ್ಯನವರ ಸರ್ಕಾರ ಅವುಗಳಿಗೆ ಬೀಗ ಜಡಿದ ಮೇಲೆ ಬಡವರಿಗೆ ದಿಕ್ಕಿಲ್ಲದಂತಾಗಿದೆ, ಪ್ರತಿಯೊಂದು ಔಷಧಿ ಹೊರಗಡೆಯಿಂದ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ' ಎಂದು ಬಿಜೆಪಿ ಆರೋಪ ಮಾಡಿದೆ.
ಮೆಡಿಕಲ್ ಮಾಫಿಯಾದಿಂದ ಜೇಬು ತುಂಬಿಸಿಕೊಳ್ಳುವಲ್ಲಿ ಬ್ಯುಸಿಯಾಗಿ ಇಲಾಖೆ ಮರೆತುಬಿಟ್ಟಿರಾ? ಸಮಸ್ಯೆ ಆಲಿಸದಷ್ಟು ಮೈಮರೆವು ಯಾಕೆ ಸ್ಪಷ್ಟಪಡಿಸುವಿರಾ? ಎಂದು ಬಿಜೆಪಿ ಪ್ರಶ್ನೆ ಹಾಕಿದೆ.