ತುಮಕೂರು: ಅಪ್ರಾಪ್ತ ಮಗನಿಗೆ ಬೈಕ್ ನೀಡಿದ ತಂದೆಗೆ ಮಗ ಮಾಡಿದ ತಪ್ಪಿಗೆ ಜೈಲು ಶಿಕ್ಷೆ ಮತ್ತು ದಂಡವನ್ನು ಕಟ್ಟುವ ಪರಿಸ್ಥಿತಿ ಬಂದೊದಗಿದ ಪ್ರಕರಣ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ವಾಹನವನ್ನು ಚಲಾಯಿಸಲು ನೀಡಿದ್ದಕ್ಕೆ ತಂದೆಗೆ ತುಮಕೂರು ಜಿಲ್ಲೆಯ ಗುಬ್ಬಿ ಜೆಎಂಎಫ್‌ಸಿ ನ್ಯಾಯಾಲಯ ರೂ. 30,000 ದಂಡ ಹಾಗೂ ಒಂದು ದಿನದ ಜೈಲು ಶಿಕ್ಷೆ ವಿಧಿಸಿದೆ.
ಕಳೆದ ವರ್ಷ ಅಕ್ಟೋಬರ್ 31 ರಂದು ಅಪ್ರಾಪ್ತ ಮಗನಿಗೆ ದ್ವಿಚಕ್ರವಾಹನವನ್ನು ತಂದೆ ನೀಡಿದರು. ಆತ ತುಮಕೂರಿನಿಂದ ಚಾಲನೆ ಮಾಡಿಕೊಂಡು ಬರುವಾಗ ರಾತ್ರಿ ಗುಬ್ಬಿ ಬೈಪಾಸ್ನ ಸಿಐಟಿ ಕಾಲೇಜ್ ಹಿಂಭಾಗ ರಸ್ತೆ ಪಕ್ಕದಲ್ಲಿದ್ದ ಮಣ್ಣಿನ ಗುಡ್ಡೆಗೆ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ.
ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಮತ್ತು ಘಟನೆಗೆ ಸಂಬಂಧಿಸಿದಂತೆ ನ್ಯಾಯ ಇಲಾಖೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಈ ಸಂಬಂಧ ನ್ಯಾಯಾಲಯ ಅಪ್ರಾಪ್ತ ಮಗನಿಗೆ ಬೈಕ್ ಕೊಟ್ಟ ತಂದೆಗೆ ಒಂದು ದಿನ ಜೈಲು ಶಿಕ್ಷೆ ಮತ್ತು ರೂ. 30,000 ದಂಡ ವಿಧಿಸಿ ತೀರ್ಪು ನೀಡಿದೆ.
ಆದ್ದರಿಂದ, ಪೋಷಕರು ತಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುವ ಬದಲು ಯೋಚಿಸಬೇಕಾಗಿ ಈ ಮೂಲಕ ಸಂದೇಶ ರವಾನಿಸಲಾಗಿದೆ.