ಮಂಗಳೂರು: ಹಿಂದೂ ಕಾರ್ಯಕರ್ತ ಹಾಗೂ ಬಿಜೆಪಿ ಯುವಮೋರ್ಚಾದ ಸಕ್ರಿಯ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮಖ ಆರೋಪಿ ಅಬ್ದುಲ್ ರೆಹಮಾನ್ ನನ್ನು NIA ಪೊಲೀಸರು ಕೇರಳದ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನ ಪತ್ತೆಗೆ ರಾಷ್ಟ್ರೀಯ ತನಿಖಾ ದಳ ಸುಳಿವು ಕೊಟ್ಟವರಿಗೆ 4 ಲಕ್ಷ ರೂ. ಗಳ ಬಹುಮಾನ ಕೂಡ ಘೋಷಣೆ ಮಾಡಿತ್ತು. ಘಟನೆ ನಡೆದ ಕೆಲ ದಿನಗಳಲ್ಲೇ ಕತಾರ್ ದೇಶಕ್ಕೆ ಪಲಾಯನ ಮಾಡಿದ್ದ ಈತನ ಬಗ್ಗೆ NIA ತಂಡ ನಿಗಾ ವಹಿಸಿತ್ತು.
ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದಲ್ಲಿ ಉಳಿದ ಆರೋಪಿಗಳು ಸಿಕ್ಕಿ ಬೀಳುತ್ತಿದ್ದಂತೆ, ಆರೋಪಿ ಅಬ್ದುಲ್ ರೆಹಮಾನ್ ವಿದೇಶಕ್ಕೆ ಪಲಾಯನ ಮಾಡಿದ್ದ. ಈ ಕೊಲೆ ಪ್ರಕರಣದಲ್ಲಿ ಪಿಎಫ್ಐ ಪ್ರಮುಖರು ಸೇರಿದಂತೆ ಅಬ್ದುಲ್ ರೆಹಮಾನ್ ಪ್ರಮುಖ ಕೊಲೆಗಾರರಿಗೆ ಆಶ್ರಯ ಮತ್ತು ಇನ್ನಿತರ ಬೆಂಬಲ ನೀಡಿರುವ ಬಗ್ಗೆ ಚಾರ್ಜ್ ಶೀಟ್ ನಲ್ಲಿ ವರದಿ ಮಾಡಲಾಗಿತ್ತು.
ಕತಾರ್ ನಿಂದ ಕಣ್ಣೂರ್ ಏರ್ ಪೋರ್ಟ್ ಗೆ ಬಂದ ಕೂಡಲೇ ಈತನನ್ನು ಬಂಧಿಸಿ ಹೆಚ್ಚಿನ ತನಿಖೆಗೆ ಕಸ್ಟಡಿಗೆ ಪಡೆಯಲಾಗಿದೆ. ಈತನ ಬಂಧನದಿಂದ ಮತ್ತಷ್ಟು ಸುಳಿವು ದೊರೆಯುವ ಸಾಧ್ಯತೆಗಳು ಇವೆ.
2022 ರ ಜುಲೈ 26 ರಂದು ಸುಳ್ಯದ ಬೆಳ್ಳಾರೆಯಲ್ಲಿ ನಡೆದ ಈ ಕೊಲೆ ಪ್ರಕರಣ ರಾಜ್ಯದಲ್ಲಿ ಭಾರಿ ಸಡ್ಡು ಮಾಡಿತ್ತು. ಅಂದಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್ ರವರ ಕಾರನ್ನು ಆಕ್ರೋಶಿತ ಕಾರ್ಯಕರ್ತರು ಅಲುಗಾಡಿಸಿದ ಘಟನೆ ದೇಶಾದ್ಯಂತ ಸಂಚಲನವನ್ನೇ ಮೂಡಿಸಿತ್ತು.