27 July 2025 | Join group

67 ಜನರ ಜೀವ ಉಳಿಸಿದ ಸಾಕು ನಾಯಿ: ಮೆಚ್ಚುಗೆಯ ಮಹಾಪೂರ - ಹಿಮಾಚಲದಲ್ಲಿ ನಡೆದ ಘಟನೆ

  • 10 Jul 2025 01:01:06 AM

ಹಿಮಾಚಲ ಪ್ರದೇಶದಲ್ಲಿ ಬಹಳ ದಿನಗಳಿಂದ ಸುರಿಯುತ್ತಿರುವ ಭೀಕರ ಮಳೆಗೆ ನೆರೆ, ಭೂಕುಸಿತ ಮತ್ತು ಇನ್ನಿತರ ಅವಘಡಗಳು ಸಂಭವಿಸಿದೆ. ಇದರ ಮಧ್ಯೆ ಒಂದು ಅಚ್ಚರಿಯ ಸಂಗತಿಯು ನಡೆದ ಬಗ್ಗೆ ವರದಿಯಾಗಿದೆ. ಸಾಕುನಾಯಿಯ ಸಮಯಪ್ರಜ್ಞೆಯಿಂದ ಆ ಗ್ರಾಮದಲ್ಲಿದ್ದ 60ಕ್ಕೂ ಹೆಚ್ಚು ಜನ ತಮ್ಮ ಪ್ರಾಣ ರಕ್ಷಿಸಿದ ಅಪರೂಪದ ಘಟನೆಯೊಂದು ನಡೆದಿದೆ.

 

ಜೂನ್ 30 ರ ಮಧ್ಯರಾತ್ರಿಯಲ್ಲಿ ಭಾರೀ ಮಳೆಯ ಸಂದರ್ಭದಲ್ಲಿ, ಸ್ಥಳೀಯ ನಾಗರಿಕರಾದ ನರೇಂದರ್ ರವರ ಮನೆಯ ಎರಡನೇ ಮಹಡಿಯಲ್ಲಿ ಇದ್ದ ರಾಕಿ ಎನ್ನುವ ಸಾಕು ನಾಯಿ ಮಧ್ಯರಾತ್ರಿಯಿಂದ 12:30 ರಿಂದ 1:00 ಗಂಟೆಯವರೆಗೆ ನಿರಂತರವಾಗಿ ಬೊಗಳಲು ಪ್ರಾರಂಭಿಸಿತು.

 

ನಾಯಿ ಎಚ್ಚರಿಕೆಯ ಕೂಗಿನಿಂದ ಎದ್ದ ಅವರು ತನ್ನ ಮನೆಯ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದನ್ನು ಗಮನಿಸಿದರು. ಅವರು ತಕ್ಷಣವೇ ಹೊರಗೆ ಓಡಿ, ಸುತ್ತಲಿನ ಮನೆಗಳಿಗೆ ತೆರಳಿ ಜನರನ್ನು ಎಚ್ಚರಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಮನವಿ ಮಾಡಿದರು.

 

ಈ ಎಚ್ಚರಿಕೆಯಿಂದಾಗಿ ಸುಮಾರು 20 ಮನೆಗಳ 60 ರಿಂದ 67 ಜನರು ಭೂಕುಸಿತ ಸಂಭವಿಸುವ ಕೆಲವೇ ನಿಮಿಷಗಳ ಮೊದಲು ಸ್ಥಳವನ್ನು ಖಾಲಿ ಮಾಡಿಕೊಳ್ಳಲು ಸಾಧ್ಯವಾಯಿತು. ಈ ಭೂಕುಸಿತದಲ್ಲಿ ಸುಮಾರು ಒಂದು ಡಜನ್ ಮನೆಗಳು ಸಂಪೂರ್ಣವಾಗಿ ನಾಶವಾದವು.

 

ಜೂನ್ 20ರಿಂದ ಪ್ರಾರಂಭವಾದ ಮುಂಗಾರು ಮಳೆಯ ಕಾರಣದಿಂದಾಗಿ ಹಿಮಾಚಲ ಪ್ರದೇಶದಲ್ಲಿ ಈಗಾಗಲೇ 78 ಮಂದಿ ಮೃತಪಟ್ಟಿದ್ದಾರೆ. ನರೇಂದರ್ ರವರ ಮೂಕ ಸಾಕು ನಾಯಿನ ಸಮಯಪ್ರಜ್ಞೆ ಮತ್ತು ನೆರವಿನ ಭಾವನೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.