ಮಂಗಳೂರು: ನಿವೃತ್ತ ಸದಸ್ಯರಿಂದ ತೆರವಾಗಿದ್ದ ರಾಜ್ಯಸಭಾ ಸದಸ್ಯರ ನೇಮಕಾತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ರವರು ಸಂವಿಧಾನದ ಆರ್ಟಿಕಲ್ 80(1)(a) ಅಡಿಯಲ್ಲಿ ನಾಲ್ವರು ಸಾಧಕರನ್ನು ನಾಮನಿರ್ದೇಶನ ಮಾಡುವುದರ ಮೂಲಕ ಭರ್ತಿ ಮಾಡಿದ್ದಾರೆ.
ವಿಶೇಷವೆಂದರೆ, ಕೇರಳದ ಶಿಕ್ಷಣತಜ್ಞ ಮತ್ತು ರಾಜ್ಯದ ಬಿಜೆಪಿಯ ಉಪಾಧ್ಯಕ್ಷರಾದ ಸದಾನಂದನ್ ಮಾಸ್ಟರ್ ಈ ನಾಲ್ವರಲ್ಲಿ ಒಬ್ಬರಾಗಿದ್ದಾರೆ. 1994ರಲ್ಲಿ ಕೇರಳದ ಪೆರಿಂಚೇರಿಯಲ್ಲಿ ಸಿಪಿಐ(ಎಂ) ಕಾರ್ಯಕರ್ತರಿಂದ ನಡೆದ ರಾಜಕೀಯ ಹಿಂಸಾಚಾರದಲ್ಲಿ ತನ್ನ ಎರಡೂ ಕಾಲುಗಳನ್ನು ಇವರು ಕಳೆದುಕೊಂಡಿದ್ದರು.
ಆದರೂ, ಧೈರ್ಯ ಮತ್ತು ಅನ್ಯಾಯದ ವಿರುದ್ಧ ಬಗ್ಗದಿರುವ ಸ್ಫೂರ್ತಿಯ ಸಂಕೇತವಾಗಿ ಶಿಕ್ಷಣ ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ದುಡಿದಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ 2021ರ ಕೇರಳ ವಿಧಾನಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಉಲ್ಲೇಖ ಮಾಡಿದ್ದರು. ಸದಾನಂದನ್ ಮಾಸ್ಟರ್ ಆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್ ನನ್ನು ಗಲ್ಲಿಗೇರಿಸುವಲ್ಲಿ ವಾದ ಮಂಡಿಸಿದ್ದ ಖ್ಯಾತ ವಕೀಲ ಉಜ್ವಲ್ ನಿಕಮ್, ರಾಜಕೀಯ ತಜ್ಞೆ ಮತ್ತು ಇತಿಹಾಸಕರಾದ ಮೀನಾಕ್ಷಿ ಜೈನ್ ಈ ಮೂವರು ಕೂಡ ನಾಮನಿರ್ದೇಶಗೊಂಡ ಇತರ ಸದಸ್ಯರುಗಳು.