ಉಡುಪಿ: ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಮಹಿಳಾ ಹಾಸ್ಟೆಲ್‌ನ ಶೌಚಾಲಯದ ಗೋಡೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಣ ದ್ವೇಷ ಉಂಟುಮಾಡುವ ರೀತಿಯ ಬರಹ ಕಾಣಿಸಿಕೊಂಡ ಪ್ರಕರಣದಲ್ಲಿ, ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಒಬ್ಬ ವಿದ್ಯಾರ್ಥಿನಿಯನ್ನು ಬಂಧಿಸಿದ್ದಾರೆ.
ಮೇ 7ರಂದು ಸಂಜೆ ಹಾಸ್ಟೆಲ್‌ನ ಮೊದಲ ಮಹಡಿಯ ಶೌಚಾಲಯದ ಗೋಡೆಯಲ್ಲಿ ಪೆನ್ಸಿಲ್‌ನಿಂದ ಅಶ್ಲೀಲ ಮತ್ತು ಪ್ರಚೋದನಕಾರಿ ಬರಹ ಬರೆಯಲಾಗಿತ್ತು. ಈ ಕುರಿತು ಹಾಸ್ಟೆಲ್ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಮಾಡಿದ್ದು, ಶಂಕಿತರ ಕೈಬರಹದ ಮಾದರಿಯನ್ನು ಕಲೆಹಾಕಿ ಹೋಲಿಕೆ ನಡೆಸಿದ್ದಾರೆ. ಈ ಆಧಾರದಲ್ಲಿ ಆರೋಪಿಯನ್ನು ಗುರುತಿಸಲಾಗಿದೆ.
ಬಂಧಿತ ಮಹಿಳೆ ಫಾತಿಮಾ ಶಬ್ನಾ (21), ಕಾಸರಗೋಡು ಮೂಲದವಳಾಗಿದ್ದು, ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿ. ಆಕೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಈ ಘಟನೆಯು ಕಾಲೇಜು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ನಡುವೆ ಆತಂಕವನ್ನು ಉಂಟುಮಾಡಿತ್ತು. ದ್ವೇಷ ಉಂಟುಮಾಡುವ ಲೇಖನದ ಉದ್ದೇಶ ಹಾಗೂ ಇತರರು ಇದರಲ್ಲಿ ಭಾಗಿಯಾಗಿದ್ದಾರಾ ಎಂಬುದರ ಬಗ್ಗೆ ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ