29 July 2025 | Join group

22 ವರ್ಷಗಳ ಬಳಿಕ... ಶವ ಹೂತಿದ್ದ ವ್ಯಕ್ತಿಯ ಪ್ರತ್ಯಕ್ಷದಿಂದ ಅನನ್ಯ ಭಟ್ ಪ್ರಕರಣಕ್ಕೆ ಬೆಳಕು ಬೀಳುತ್ತಿದೆಯಾ?

  • 16 Jul 2025 01:16:54 AM

ಬೆಳ್ತಂಗಡಿ: 2003 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳಕ್ಕೆ ಭೇಟಿ ನೀಡಿದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಮಗಳ ನಾಪತ್ತೆ ಪ್ರಕರಣದ ಬಗ್ಗೆ ಹಲವಾರು ಬಾರಿ ಮಾಧ್ಯಮಗಳ ಮುಂದೆ ಬೇಸರ ಮತ್ತು ಕೋಪವನ್ನು ವ್ಯಕ್ತಪಡಿಸಿದ್ದ ಅನನ್ಯ ಭಟ್ ತಾಯಿ, ಸುಜಾತ ಭಟ್ ಇದೀಗ ಮಗಳ ನಾಪತ್ತೆ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕೆಂದು ಬೆಳ್ತಂಗಡಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

 

22 ವರ್ಷಗಳ ಬಳಿಕ, ಶವ ಹೂತಿದ್ದ ವ್ಯಕ್ತಿಯ ಒಪ್ಪಿಗೆಯ ನಂತರ ಪ್ರಕರಣ ಮತ್ತೆ ಚರ್ಚೆಗೆ ಬಂದಿರುವುದು ಬಹಳ ಕುತೂಹಲ ಮೂಡಿಸಿದೆ. ಇತ್ತೀಚೆಗೆ, ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ಶವಗಳನ್ನು ಗುಪ್ತವಾಗಿ ಮಣ್ಣು ಮಾಡಲಾಗಿದೆ ಎಂಬ ಗಂಭೀರ ಆರೋಪವೊಂದನ್ನು ವ್ಯಕ್ತಿಯೊಬ್ಬರು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ)ಗೆ ಪತ್ರದ ಮೂಲಕ ತಿಳಿಸಿದ್ದಾರೆ. ನಂತರ ಅವರು ತಪ್ಪಿತಸ್ಥ ಭಾವನೆಯಿಂದಾಗಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ಹಾಜರಾಗಿ, ಹಲವು ಶವಗಳನ್ನು ತಾನೇ ಹೂಳಿದ್ದೇನೆ ಎಂಬ ಬಗ್ಗೆ ಹೇಳಿಕೆ ನೀಡಿದ್ದಾರೆ. ಈತನ ಹೆಸರನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.

 

ಈ ವಿಚಾರದ ನಂತರ, ಇದೀಗ ಅನನ್ಯ ಭಟ್ ತಾಯಿ ಎಚ್ಚೆತ್ತುಕೊಂಡಿದ್ದಾರೆ. ತನ್ನ ಮಗಳ ನಾಪತ್ತೆ ಪ್ರಕರಣಕ್ಕೆ ನ್ಯಾಯ ಸಿಗಬಹುದು ಎನ್ನುವ ಆಶಾ ಭಾವದೊಂದಿಗೆ ತಾಯಿ ಸುಜಾತಾ ಭಟ್ ಅವರು ದಕ್ಷಿಣ ಕನ್ನಡ ಎಸ್‌ಪಿಗೆ ಭೇಟಿ ನೀಡಿ ತಮ್ಮ ಮಗಳು ನಾಪತ್ತೆಯಾಗಿದ್ದ ಸಂದರ್ಭವನ್ನು ನೆನೆಸಿ ಅಧಿಕೃತ ದೂರು ಸಲ್ಲಿಸಿದ್ದಾರೆ. ಅವರ ಮಾತಿನ ಪ್ರಕಾರ, ಅನನ್ಯ ಧರ್ಮಸ್ಥಳಕ್ಕೆ ಭೇಟಿ ನೀಡಿದ ನಂತರ ಆಕೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲವಂತೆ.

 

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ಅನನ್ಯ ನಾಪತ್ತೆ ಪ್ರಕರಣಕ್ಕೆ ಶವ ಹೂತ ವ್ಯಕ್ತಿಯ ಹೇಳಿಕೆಗಳು ಸಂಬಂಧವಿದೆಯೋ ಎಂಬ ಕುತೂಹಲ ಭರಿತ ಪ್ರಶ್ನೆ ಮುಂದಾಗುತ್ತಿವೆ.

 

ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿರುವ ಈ ಎಲ್ಲಾ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಅಧಿಕಾರಿಗಳು ಮುಂದಿನ ತನಿಖೆಗೆ ತಯಾರಿ ನಡೆಸುತ್ತಿದ್ದಾರೆ. ಬೆಳ್ತಂಗಡಿ ಮತ್ತು ಧರ್ಮಸ್ಥಳ ಸುತ್ತಮುತ್ತದ ಸ್ಥಳಗಳಲ್ಲಿ ತನಿಖೆ ನಡೆಯಲಿದೆ ಎಂಬ ಅನೇಕ ಊಹಾಪೋಹಗಳಿಗೆ ನಡೆಯುತ್ತಿವೆ.