ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ದಾಂಪತ್ಯ ಕಲಹ ಭೀಕರ ಕೊಲೆಯವರೆಗೆ ತಲುಪಿದ ದಾರುಣ ಘಟನೆ ನಡೆದಿದೆ. ಬೆಳ್ತಂಗಡಿ ತಾಲ್ಲೂಕಿನ ತೆಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಜಾರು ಎಂಬಲ್ಲಿ ಪತಿ ರಫೀಕ್ (38) ಪತ್ನಿ ಝೀನತ್ ಅವರನ್ನು ಚಾಕು ಇರಿದು ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ದಂಪತಿಗೆ ಇಬ್ಬರು ಮಕ್ಕಳು ಇದ್ದರೂ, ಇತ್ತೀಚಿನ ದಿನಗಳಲ್ಲಿ ಪತಿಯ ಅನೈತಿಕ ಸಂಬಂಧ ಕುರಿತು ಮನೆಯಲ್ಲಿ ನಿರಂತರ ಜಗಳ ನಡೆಯುತ್ತಿತ್ತಂತೆ. ಗುರುವಾರ ಬೆಳಿಗ್ಗೆಯೂ ಇದೇ ವಿಚಾರವಾಗಿ ಜಗಳ ಉಂಟಾಗಿ, ರೋಷದಿಂದ ಚಾಕು ಹಿಡಿದ ರಫೀಕ್ ಪತ್ನಿ ಝೀನತ್ ಅವರ ಮೇಲೆ ಹಲ್ಲೆ ನಡೆಸಿದ ಎನ್ನಲಾಗಿದೆ.
ಗಂಭೀರ ಗಾಯಗೊಂಡ ಝೀನತ್ ಅವರನ್ನು ಸ್ಥಳೀಯರು ಹಾಗೂ ಸಂಬಂಧಿಕರು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಸ್ಥಳದಲ್ಲೇ ಮಹಜರು ನಡೆಸಿ ಪ್ರಕರಣ ದಾಖಲಿಸಿದ್ದಾರೆ.