ಓಡಿಶಾ: ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಸ್ಥಾನವನ್ನು ಗಟ್ಟಿಯಾಗಿ ಸ್ಥಾಪಿಸುತ್ತಿದ್ದಾರೆ. ಅವರ ಸ್ವಾವಲಂಬನೆ ಮತ್ತು ಧೈರ್ಯ ನಿತ್ಯ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಇತ್ತೀಚೆಗೆ ಒಡಿಶಾದ 45 ವರ್ಷದ ಸಂಧ್ಯಾರಾಣಿ ಮಾಝಿ ಅವರು ಇನ್ನೊಂದು ಐತಿಹಾಸಿಕ ಹೆಜ್ಜೆ ಇಟ್ಟಿದ್ದಾರೆ.
ಸಾಮಾನ್ಯವಾಗಿ ಮಹಿಳೆಯರು ಆಟೋ, ಬಸ್, ತಮ್ಮ ಸ್ವಂತ ಕಾರುಗಳನ್ನು ಚಲಾಯಿಸುವುದು ಕಂಡಿದ್ದೇವೆ. ಆದರೆ, ಈಗ ಸಂಧ್ಯಾರಾಣಿ ಮಾಝಿ ದೇಶದಲ್ಲೇ ಮೊದಲ ಬಾರಿಗೆ ಸರ್ಕಾರದ ಅಧಿಕೃತ ಕಾರು ಚಾಲಕಿಯಾಗಿ ನೇಮಕಗೊಂಡ ಮಹಿಳೆಯಾಗಿದ್ದಾರೆ! ಇದು ಕೇವಲ ಉದ್ಯೋಗವಲ್ಲ, ಇದು ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ದೊಡ್ಡ ಹೆಜ್ಜೆ.
ಮಯೂರ್ಭಂಜ್ ಜಿಲ್ಲೆಯ ಸಂಧ್ಯಾರಾಣಿ, ಜಾಜ್‌ಪುರದ ಛಾಟಿಯಾದಲ್ಲಿರುವ ರಾಜ್ಯ ಸಾರಿಗೆ ಪ್ರಾಧಿಕಾರದ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿದ್ದಾರೆ. ಈ ಸಾಧನೆಯ ಫಲವಾಗಿ, ಅವರನ್ನು ಜೂನ್ 2025ರಿಂದ ವಾಣಿಜ್ಯ ಮತ್ತು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಅಧಿಕೃತ ಕಾರು ಚಾಲಕಿಯಾಗಿ ನೇಮಿಸಲಾಗಿದೆ.
ಅಧಿಕಾರಿಗಳ ಮಾತಿನಲ್ಲಿ, “ಇದು ಒಡಿಶಾ ಮಾತ್ರವಲ್ಲ, ಸಂಪೂರ್ಣ ಭಾರತದ ಹೆಮ್ಮೆ! ಮಹಿಳೆಯರು ಕೇವಲ ಮನೆಗಳಲ್ಲದೇ, ಎಲ್ಲ ಕ್ಷೇತ್ರಗಳಲ್ಲೂ ಶ್ರೇಷ್ಠತೆ ತೋರಿಸಬಹುದು ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ.” ಎಂದಿದ್ದಾರೆ.
ಸಂಧ್ಯಾರಾಣಿ ಮಾಝಿಯ ಸಾಧನೆಯು ಇನ್ನು ಹೆಚ್ಚು ಮಹಿಳೆಯರಿಗೆ ಪ್ರೇರಣೆ ನೀಡುತ್ತದೆ ಎಂಬ ನಿರೀಕ್ಷೆಯಿದೆ.